ಬೆಂಗಳೂರು: ಕೆನಡಾದಲ್ಲಿ ಹತ್ಯೆಯಾದ ಕನ್ನಡಿಗ ಚಂದನ್ ಪಾರ್ಥಿವ ಶರೀರ ಸ್ವಗ್ರಾಮ ತ್ಯಾಮಗೊಂಡ್ಲು ತಲುಪುತ್ತಿದ್ದಂತೆ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಮನೆ ಮುಂದೆ ಪೂಜಾ ವಿಧಿವಿಧಾನಗಳ ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 12 ರಿಂದ 3ರವರೆಗೆ ಜನರಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಬಳಿಕ ಆರ್ಯವೈಶ್ಯ ಸಂಘದ ಸ್ಥಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ತಾಯಿ ಶೈಲಜಾ ಕಣ್ಣೀರಿಟ್ಟುಕೊಂಡು, “ನಮ್ಮ ಮಗ ಒಳ್ಳೆಯ ಹೆಸರು ಮಾಡಿದ್ದ. ನಮ್ಮನ್ನ ಕೆನಡಾಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದ. ಸುಖವಾಗಿ ಬದುಕಬೇಕಿದ್ದ ವಯಸ್ಸಿನಲ್ಲಿ ನಮ್ಮನ್ನ ಬಿಟ್ಟು ಹೋದ. ಅವನ ಕೊಲೆಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಬೇಕು” ಎಂದು ಮನವಿ ಮಾಡಿದರು.
ಕುಟುಂಬದ ಆಕ್ರಂದನ ನಡುವೆ ಗ್ರಾಮಸ್ಥರು ಸಂತಾಪ ಸೂಚಿಸಿದ್ದು, ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.



