ಕಲಬುರ್ಗಿ:– ಪುಂಡಾಟ ಮೆರೆಯುತ್ತಿರುವ ಮರಾಠಿ ಪುಂಡರಿಗೆ ಕನ್ನಡಿಗರು ತಿರುಗೇಟು ಕೊಟ್ಟಿದ್ದು, ಮಹಾರಾಷ್ಟ್ರ ಬಸ್‌ಗೆ ಕಪ್ಪು ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ. ಜೈ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಮಹಾರಾಷ್ಟ್ರ ಬಸ್ ನಾಮಫಲಕಕ್ಕೆ ಕಪ್ಪು ಮಸಿ ಬಳಿಯುವ ಮೂಲಕ ಪಂಥಾಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಸಿಬ್ಬಂದಿಗೆ ಮಸಿ ಬಳಿದ ಪ್ರಕರಣಕ್ಕೆ ಪ್ರತ್ಯುತ್ತರವಾಗಿ ನಗರದ ಆಳಂದ ಚೆಕ್ ಪೋಸ್ಟ್ ಬಳಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ತಡೆದ ಜೈ ಕರ್ನಾಟಕ ಕಾರ್ಯಕರ್ತರು ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಮರಾಠಾ ಪುಂಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಅಷ್ಟೇ ಅಲ್ಲ, ಕಪ್ಪು ಮಸಿ ಬಳಿದ ಬಳಿಕ ಬಸ್ ಮೇಲೆ ಕನ್ನಡ ಧ್ವಜ ನೆಟ್ಟು ನಂತರ ಬಸ್ ಚಾಲಕನಿಗೆ ಹೂವಿನ ಹಾರ ಹಾಕಿ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದರು.



