ಬೆಂಗಳೂರು: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಹಾಗೂ ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ವೈಯಕ್ತಿಕವಾಗಿ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಪರ್ಕಕ್ಕೆ ಸಿಗುತ್ತಿಲ್ಲ,” ಎಂದು ತಿಳಿಸಿದ್ದಾರೆ.
ಈ ಕುರಿತು ದೆಹಲಿಯ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ಮಧ್ಯಪ್ರಾಚ್ಯದಲ್ಲಿ ಲಕ್ಷಾಂತರ ಭಾರತೀಯರು, ಅದರಲ್ಲೂ ಕರ್ನಾಟಕ ಹಾಗೂ ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದು ಒತ್ತಾಯಿಸಿದರು.
ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಡಿಸಿಎಂ, ಮಕ್ಕಳ ಶಾಲೆಗಳ ಮೇಲಿನ ದಾಳಿಗಳು ಖಂಡನೀಯ ಎಂದರು. “ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಇಂತಹ ದಾಳಿಗಳು ಸರಿಯಲ್ಲ. ಆದರೆ ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ,” ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರದಿಂದ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಸಾಧ್ಯತೆ ಇಲ್ಲ. ಯಾವುದೇ ಅಧಿಕೃತ ಮಾಹಿತಿ ವಿದೇಶಾಂಗ ಇಲಾಖೆಯಿಂದಲೇ ಬರಬೇಕು ಎಂದು ಸ್ಪಷ್ಟಪಡಿಸಿದ ಅವರು, ವಿದೇಶದಲ್ಲಿರುವ ಕನ್ನಡಿಗರಿಗೆ ಆತ್ಮಸ್ಥೈರ್ಯ ತುಂಬಲು ಕನ್ನಡ ಸಂಘಟನೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.



