ವಿಜಯಸಾಕ್ಷಿ ಸುದ್ದಿ, ಗದಗ : ಅಧಿಕಾರದಾಸೆಗಾಗಿ ಘೋಷಿಸಿದ ಗ್ಯಾರಂಟಿಗಳ ಜಾರಿಗಾಗಿ ರಾಜ್ಯ ಸರ್ಕಾರ ಕನ್ನಡಿಗರ ಮೇಲೆ ಸಾಲದ ಭಾರ ಹೊರಿಸಲು ಮುಂದಾಗಿದ್ದು, ಇದು ಸಾಲದ `ಗ್ಯಾರಂಟಿ’ ಬಜೆಟ್ ಆಗಿದೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸಾಲ ಮಾಡುತ್ತಾರೆ ಎಂದು ಸುಳ್ಳು ಹೇಳುವ ಸಿದ್ಧರಾಮಯ್ಯನವರು ಈಗ ತಾವೇನು ಮಾಡುತ್ತಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ಕೊಟ್ಟಿಲ್ಲ ಎಂದು ಜನರನ್ನು ನಂಬಿಸಲು ಮುಖ್ಯಮಂತ್ರಿಗಳು ಹಾತೊರೆಯುತ್ತಿದ್ದಾರೆ. ಆದರೆ ರಾಜ್ಯದ ಜನರಿಗೆ ಸಿದ್ಧರಾಮಯ್ಯ ಸರ್ಕಾರದಿಂದಲೇ ಸಾಕಷ್ಟು ಹಾನಿ ಇದೆ ಎಂಬುದನ್ನು ಈ ಬಜೆಟ್ ಖಾತ್ರಿಪಡಿಸಿದ್ದು, ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಸುಮಾರು ೨ ಲಕ್ಷ ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನು ದಿವಾಳಿಯಾಗಿಸುತ್ತಿದ್ದಾರೆ. ಓಪಿಎಸ್ ಜಾರಿಗೊಳಿಸುತ್ತೇವೆ ಎಂಬ ಮಾತನ್ನು ಸಹ ಉಳಿಸಿಕೊಂಡಿಲ್ಲ, ಜೊತೆಗೆ ಏಳನೇ ವೇತನ ಆಯೋಗ ಜಾರಿಯ ಸ್ಪಷ್ಟ ಘೋಷಣೆ ಸಹ ಇಲ್ಲ. ತುಷ್ಟೀಕರಣ-ಓಲೈಕೆ ಬಜೆಟ್‌ನಲ್ಲಿ ಎದ್ದುಕಾಣುತ್ತಿದ್ದು, ೧೪ ಬಜೆಟ್ ಮಂಡಿಸಿರುವ ಸಿದ್ಧರಾಮಯ್ಯನವರು ಇಂಥದೊಂದು ದುರದೃಷ್ಟಕರ ಬಜೆಟ್ ಮಂಡಿಸಿರುವುದು ರಾಜ್ಯದ ಜನರ ದುರ್ದೈವ ಎಂದು ಅಭಿಪ್ರಾಯಪಟ್ಟಿದ್ದಾರೆ.