ಬೆಂಗಳೂರು: ಕಾಂತಾರ ಚಾಪ್ಟರ್–1 ಚಿತ್ರದ ದೈವಪಾತ್ರದ ಕುರಿತು ಅಪಮಾನಕಾರಿ ಸನ್ನೆ ಮಾಡಿದ ಆರೋಪದ ಹಿನ್ನೆಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಚಾವುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಹಾಗೂ ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಗೋವಾದಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಸಂದರ್ಭದಲ್ಲಿ ಕಾಂತಾರ ಚಾಪ್ಟರ್–1 ಕುರಿತು ಮಾತನಾಡುವ ವೇಳೆ ನಡೆದ ಸನ್ನೆಗೆ ರಣವೀರ್ ತಕ್ಷಣ ಕ್ಷಮೆ ಕೋರಿದ್ದಾರೆ ಎಂದು ತಿಳಿಸಿದರು. ಅವರು ಉದ್ದೇಶಪೂರ್ವಕವಾಗಿ ಯಾರ ಭಾವನೆಗೂ ಧಕ್ಕೆ ಉಂಟುಮಾಡಿಲ್ಲ. ಅಗತ್ಯವಿದ್ದರೆ ತಿದ್ದುಪಡಿ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದರು.
ಪೀಠವು, “ಚಾವುಂಡಿ ದೈವದ ಪಾತ್ರವನ್ನು ರಿಶಬ್ ಶೆಟ್ಟಿ ನಿರ್ವಹಿಸಿದ್ದಾರೆ. ದೈವವನ್ನು ‘ದೆವ್ವ’ ಎಂದು ಹೇಳಿ ಮಿಮಿಕ್ರಿ ಮಾಡುವುದು ಜನರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ವಿಚಾರ. ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಕಾನೂನಿಗಿಂತ ಮೇಲಲ್ಲ ಎಂದು ಅಭಿಪ್ರಾಯಪಟ್ಟಿತು.ಕ್ಷಮೆ ಕೇಳಿದರೂ ಹೇಳಿದ ಮಾತು ಅಳಿದು ಹೋಗುವುದಿಲ್ಲ. ಇಂಟರ್‌ನೆಟ್ ಯಾವುದನ್ನೂ ಮರೆತೇ ಬಿಡುವುದಿಲ್ಲ,” ಎಂದು ನ್ಯಾಯಪೀಠ ತೀಕ್ಷ್ಣವಾಗಿ ತಿಳಿಸಿತು.
ದೂರುದಾರರ ಪರ ವಕೀಲರು, ಘಟನೆ ವೇಳೆ ರಿಷಬ್ ಶೆಟ್ಟಿ ಬೇಡ ಎಂದು ಹೇಳಿದರೂ ರಣವೀರ್ ಮಾತು ಮುಂದುವರಿಸಿದ್ದರು ಎಂದು ಆರೋಪಿಸಿದರು.
ಜೊತೆಗೆ, ರಣವೀರ್ ಅವರ ಪತ್ನಿ ದೀಪಿಕಾ ಪಡಕೋಣೆ ಕರ್ನಾಟಕದವರಾಗಿರುವುದರಿಂದ ಸ್ಥಳೀಯ ಆಚರಣೆಗಳ ಅರಿವು ಇರಬೇಕಿತ್ತು ಎಂದು ವಾದಿಸಿದರು. ತನಿಖೆಗೆ ಸಹಕರಿಸುವಂತೆ ರಣವೀರ್‌ಗೆ ಸೂಚಿಸಿದ ಪೀಠ, ಸರ್ಕಾರ ಮತ್ತು ದೂರುದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆಯನ್ನು ಸೋಮವಾರ (ಮಾ.2) ಸಂಜೆ 4 ಗಂಟೆಗೆ ಮುಂದೂಡಿತು.



