ವಿಜಯಸಾಕ್ಷಿ ಸುದ್ದಿ, ಗದಗ: ಕರಾಟೆಯನ್ನು ಸಿನಿಮಾದಲ್ಲಿ ಪ್ರಯೋಗ ಮಾಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದೆ. ಅದರಂತೆ ಎರಡು ಸಿನಿಮಾದಲ್ಲಿ ನೈಜ ಕರಾಟೆ ಪಟುಗಳಿಗೆ ಅವಕಾಶ ಮಾಡಿಕೊಡಲಾಯಿತು. ಅದರಲ್ಲಿ ಒಂದು ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾದರೆ, ಇನ್ನೊಂದು ಸಿನಿಮಾಗೆ ಹೇಳಿಕೊಳ್ಳುವಷ್ಟು ಪ್ರತಿಕ್ರಿಯೆ ದೊರೆಯಲಿಲ್ಲ. ನಂತರ ಸ್ವತಃ ನಾನೇ ನಿರ್ದೇಶಿಸಿರುವ `ಕರಾಸ್ತ್ರ’ ಸಿನಿಮಾ ಸಿದ್ಧಪಡಿಸಲಾಗಿದ್ದು, ಎಪ್ರಿಲ್ 5ರಂದು ನಗರದ ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದಲ್ಲಿ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಹಾಗೂ ಕರಾಟೆ ಬೆಲ್ಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ನಾರಾಯಣ ಪೂಜಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದ್ವಾಪರ ಯುಗದಲ್ಲಿ ನಡೆದ ಘಟನೆಯ ಬಗೆಗಿನ ಪ್ರಶ್ನಾರ್ಥಕ ವಿಷಯಗಳು ಹಾಗೂ ಪ್ರಶ್ನಾತೀತ ವಿಷಯಗಳನ್ನು ಯಾವ ರೀತಿ ಬಗೆಹರಿಸಬೇಕು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಸಮಾಜದಲ್ಲಿ ಮಹಿಳೆಯರು ಯಾವ ರೀತಿ ಬದುಕಬೇಕು ಮತ್ತು ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಿದರು.
ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಮೂಲಕ ಪ್ರಥಮ ಕಾಣಿಕೆಯಾಗಿ ‘ಕರಾಸ್ತ್ರ’ ಕನ್ನಡ ಚಲನಚಿತ್ರ ಉತ್ತರ ಕರ್ನಾಟಕದ ಕಲಾವಿದರನ್ನು ಸೇರಿಸಿಕೊಂಡು ನಿರ್ಮಿಸಲಾಗಿದೆ. ಇದೀಗ ಈ ಚಿತ್ರದ ಟ್ರೈಲರ್ ಮತ್ತು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡುತ್ತಿದ್ದೇವೆ. ಪಾತ್ರದಲ್ಲಿ ರಿಯಲ್ ಕರಾಟೆ ಪಟುಗಳು ಮತ್ತು ನಾಲ್ವರು ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಹುಬ್ಬಳ್ಳಿ, ಬ್ಯಾಡಗಿ, ಗದಗ, ಹಾವೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಕತೆ, ಚಿತ್ರಕತೆ, ಸಾಹಿತ್ಯ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ನಾನೇ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಟಿ ಮನಿಷಾ ಕಬ್ಬೂರ, ಬಸವರಾಜ ಹೊಂಬಾಳಿ, ಕರಾಟೆ ಶಿಕ್ಷಕರಾದ ಮಂಜುನಾಥ, ಡಾ. ಪ್ರಭು ಗಂಜಿಹಾಳ, ಶ್ರೀನಿವಾಸ ಹುಯಿಲಗೋಳ ಉಪಸ್ಥಿತರಿದ್ದರು.
ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಚಲನಚಿತ್ರದ ಬಿಡುಗಡೆ ಕಾರ್ಯಕ್ರಮವನ್ನು ಜಗದ್ಗುರು ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಡಾ. ಸಿದ್ದರಾಮ ಮಹಾಸ್ವಾಮಿಗಳು ನೆರವೇರಿಸಲಿದ್ದು, ಮುಂದಿನ ದಿನಗಳಲ್ಲಿ ಕರಾಸ್ತç ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.