ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆ (ಹೆಚ್. ಶಿವರಾಮೇಗೌಡ್ರ ಬಣ) ಗದಗ ಜಿಲ್ಲಾ ಘಟಕದಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಪದಾಧಿಕಾರಿಗಳ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರವೇ ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಪಿ.ಪರ್ವತಗೌಡ್ರ ಮಾತನಾಡಿ, ನಮ್ಮ ಹಿರಿಯರು ತಮ್ಮ ತ್ಯಾಗ-ಬಲಿದಾನಗಳಿಂದಲೇ ಈ ಕನ್ನಡ ನಾಡಿನ ಏಕೀಕರಣಗೊಳಿಸಿದ್ದು, ಅದರ ಸವಿನೆನಪಿಗಾಗಿ ನಾವೆಲ್ಲರೂ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ.
ಪ್ರತಿ ವರ್ಷದಂತೆ ಈ 69ನೇ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ್ರ ಬಣ) ಗದಗ ಜಿಲ್ಲಾ ಘಟಕ, ತಾಲೂಕಾ ಘಟಕ, ಹೋಬಳಿ ಘಟಕ, ವಾರ್ಡ್ ಘಟಕ ಮತ್ತು ಗ್ರಾಮ ಘಟಕಗಳಲ್ಲಿ ನಮ್ಮ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳ ಮೂಲಕ ಸಂಘಟನೆಗೆ ಹೆಮ್ಮೆ ತರುವ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕೆಂದು ಕರೆ ನೀಡಿದರು.
ಗದಗ ಜಿಲ್ಲಾ ಸಂಚಾಲಕ ಪರಶುರಾಮ ಬನ್ನೂರ ಮಾತನಾಡಿ, ಗದಗ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳ ಮುಂದೆ ಧ್ವಜಾರೋಹಣ ಮಾಡುವ ಮೂಲಕ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಈ ನಾಡಿಗೆ ಹೆಮ್ಮೆ ತರಬೇಕು ಎಂದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗೌರವಾಧ್ಯಕ್ಷ ಗುರುರಾಜ ಕಲಕೇರಿ, ಜಿಲ್ಲಾ ಪ್ರ.ಕಾ. ಬಸವರಾಜ ಮುಳ್ಳಾಳ, ಉತ್ತರ ಕರ್ನಾಟಕ ರೈತ ಘಟಕದ ಅಧ್ಯಕ್ಷ ಬಸಯ್ಯಾ ಗುಡ್ಡಿಮಠ, ತಾಲೂಕಾಧ್ಯಕ್ಷ ಸಂತೋಷ ಕುಂಬಾರ, ವಿದ್ಯಾರ್ಥಿ ಘಟಕದ ಉದಯ್ ದಳವಾಯಿ, ದಾವಲ್ ಮುಳಗುಂದ, ಗದಗ-ಬೆಟಗೇರಿ ಶಹರಾಧ್ಯಕ್ಷ ಮುತ್ತು ಭಜಂತ್ರಿ, ಹಿರಿಯರಾದ ಚಂದ್ರಣ್ಣಾ ಬಿಂಗಿ, ವಿನೋದ ಗಬ್ಬುರ, ಶಿವಣ್ಣಾ ಹುಡೇದ, ಮಂಜುನಾಥ ಕಟಗಿ, ಸಿಕಂದರ ಅಣ್ಣಿಗೇರಿ, ಸಂಜೀವ ಬೆನಹಾಳ, ಅಪ್ಪಣ್ಣಾ ಕಾಳೆ, ಪ್ರಶಾಂತ ವಕ್ರದ, ಮಾರುತಿ ಬೀರೊಜಿ ಮುಂತಾದವರಿದ್ದರು.