ಕರ್ನಾಟಕ ದೇವದಾಸಿ ಪದ್ಧತಿ ತಡೆ ಮಸೂದೆ ಸ್ವಾಗತಾರ್ಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಹಕ್ಕು ಅಭಿವೃದ್ಧಿ ಇಲಾಖೆಯ ಮುತುವರ್ಜಿಯಿಂದ, ರಾಜ್ಯದಲ್ಲಿ ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಮತ್ತು ದೇವದಾಸಿ ಮಹಿಳೆಯರ ಮಕ್ಕಳ ತಂದೆಯನ್ನು ಗುರುತಿಸುವ ಹಕ್ಕು ಸೇರಿದಂತೆ ಸಮಗ್ರ ಪುನರ್ವಸತಿ ಕಲ್ಪಿಸುವ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ-2025ಕ್ಕೆ ಕ್ರಮವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳ ಗದಗ ಜಿಲ್ಲಾ ಸಮಿತಿ ಸ್ವಾಗತಿಸಿದೆ.

Advertisement

ಈ ಕುರಿತು ಮಾತನಾಡಿದ ಜಿಲ್ಲಾ ಮುಖಂಡ ಬಾಲು ರಾಠೋಡ, 2007ರಿಂದಲೇ ಈ ಹಕ್ಕೊತ್ತಾಯವನ್ನು ಸರಕಾರದ ಮುಂದೆ ಮಂಡಿಸುತ್ತಾ ಬರಲಾಗಿದೆ. 15 ವರ್ಷಗಳ ನಂತರವಾದರೂ ಈ ಮಸೂದೆ ಈಗ ಹೊರಬರುತ್ತಿರುವುದು ಸಂತಸದ ವಿಷಯವಾಗಿದೆ. ಸಾಮಾಜಿಕ ದೌರ್ಜನ್ಯ ಹಾಗೂ ತಾರತಮ್ಯದ ಭಾಗವಾಗಿ ಬಲವಂತವಾಗಿ ಜಾರಿಯಲ್ಲಿರುವ ಈ ಪದ್ಧತಿಯನ್ನು ತಡೆಯಲು ಹಾಲಿ ಕಾಯ್ದೆಗಳು ಹಾಗೂ ಪುನರ್ವಸತಿ ಯೋಜನೆಗಳು ಅಸಮರ್ಪಕವಾಗಿವೆ.

ರಾಜ್ಯ ಸರಕಾರ ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಎಲ್ಲ ಪರಿಶಿಷ್ಟ ಜಾತಿ/ಪಂಗಡಗಳ ಎಲ್ಲ ಸದಸ್ಯರ ಗಣತಿ ನಡೆಸಿ ಅವರೆಲ್ಲರ ಸ್ವಾವಲಂಬಿ ಬದುಕಿಗೆ ಪರಿಣಾಮಕಾರಿಯಾದ ಪುನರ್ವಸತಿಯನ್ನು ಕೈಗೊಳ್ಳುವುದು ದೌರ್ಜನ್ಯದ ದೇವದಾಸಿ ಪದ್ಧತಿ ತಡೆಯಲು ಹಾಗೂ ಮಸಣ ಕಾರ್ಮಿಕರ ಬಿಟ್ಟಿ ಚಾಕರಿ ತಡೆಯಲು ಮತ್ತು ಒಳಚರಂಡಿ, ಮಲಗುಂಡಿ ಶುಚಿ ಕೆಲಸಗಾರರನ್ನು ರಕ್ಷಿಸಲು ಇರುವ ಏಕೈಕ ದಾರಿಯಾಗಿದೆ.

ಈ ಕೂಡಲೇ ಮಸೂದೆಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು ಮತ್ತು ಅಲ್ಲಿನ ಅಭಿಪ್ರಾಯಗಳನ್ನು ಗಮನಿಸಿ, ವಿಳಂಬವಾಗುವುದನ್ನು ತಪ್ಪಿಸಿ, ಬೇಗನೆ ಕಾಯ್ದೆಯಾಗಿಸುವಂತೆ ನಮ್ಮೆರಡೂ ಸಂಘಗಳು ಮನವಿ ಮಾಡುತ್ತವೆ ಎಂದು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here