ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೆ ಕರ್ನಾಟಕದ ಕಾಂಗ್ರೆಸ್‌ನಿಂದ ಹೈಕಮಾಂಡಿಗೆ ಕಪ್ಪು ಹಣ ಹೋಗುತ್ತಿದ್ದು, ಇದೀಗ ಬಿಹಾರ ಚುನಾವಣೆಗೂ ಸಹ ಇಲ್ಲಿಂದಲೇ ಸಾವಿರಾರು ಕೋಟಿ ಹಣ ಸಂದಾಯವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕವು ಒಂದು ರೀತಿಯಲ್ಲಿ ಎಟಿಎಂ ಇದ್ದಂತೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದರು.
ಅವರು ಲಕ್ಷ್ಮೇಶ್ವರದಲ್ಲಿ ಮಾತನಾಡುತ್ತ, ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿ ಮಂತ್ರಿಮಂಡಳದ ಬದಲಾವಣೆ ನೆಪ ಇಟ್ಟುಕೊಂಡು ಎಲ್ಲ ಸಚಿವರಿಂದ ಹಣ ಸಂಗ್ರಹ ಮಾಡುತ್ತಿದ್ದು, ಹೆಚ್ಚು ಕಪ್ಪು ಹಣ ಕೊಟ್ಟವರು ಮಂತ್ರಿಯಾಗುತ್ತಾರೆ ಮತ್ತು ಮಂತ್ರಿಯಾಗಿ ಉಳಿಯುತ್ತಾರೆ. ಇಲ್ಲದಿದ್ದಲ್ಲಿ ಅವರನ್ನು ಕಿತ್ತು ಹಾಕಲಾಗುತ್ತದೆ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ನಾಯಕ ಎನ್ನುವ ಸಿಎಂ ಸಿದ್ದರಾಮಯ್ಯನವರು ಮಾಡಿರುವ ಸಾಧನೆಗಳಾದರೂ ಏನು ಎಂದು ಪ್ರಶ್ನಿಸಿದ ಅವರು, ವಾಲ್ಮೀಕಿ ನಿಗಮದ 187 ಕೋಟಿ ರೂ ಹಣವನ್ನು ಭ್ರಷ್ಟಾಚಾರದ ಮೂಲಕ ತೆಗೆದು ಅದನ್ನು ತೆಲಂಗಾಣ ಚುನಾವಣೆಗೆ ಕೊಟ್ಟಿದ್ದು, ಈ ಹಣ ದುರುಪಯೋಗ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಮುಖ್ಯ ಕಾರಣರಾಗಿದ್ದಾರೆ.
ಎಸ್‌ಟಿ ಸಮಾಜದ ನಾಗೇಂದ್ರ ಹಾಗೂ ಕೆ.ಎನ್. ರಾಜಣ್ಣ ಅವರ ಮಂತ್ರಿಗಿರಿಯನ್ನು ಕಿತ್ತುಕೊಳ್ಳುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.



