ಈಗ ಮೇಲ್ಮನೆ ಅಥವಾ ವಿಧಾನಪರಿಷತ್ತು, ಕೆಳಮನೆ ಅಥವಾ ವಿಧಾನಸಭೆಗಳದ್ದೇ ಸುದ್ದಿ. ಕಾರಣ ಇತ್ತೀಚೆಗೆ ಮುಕ್ತಾಯಗೊಂಡ ಜಂಟಿ ಅಧಿವೇಶನದಲ್ಲಿ ಜರುಗಿದ ಅಹಿತಕರ ಘಟನೆಗಳು. ರಾಜ್ಯಪಾಲರ ಭಾಷಣ ಹಾಗೂ ಆಯವ್ಯಯದ ಮೇಲಿನ ಚರ್ಚಗೆ ಸೀಮಿತವಾಗಬೇಕಿದ್ದ ಅಧಿವೇಶನ ಹನಿಟ್ರ‍್ಯಾಪ್‌ನಂತಹ ಹೊಲಸು ವಿಷಯಗಳಿಗೆ ಬಲಿಯಾಯಿತು. ಒಂದು ಸಂದರ್ಭದಲ್ಲಿ ಅಧಿವೇಶದಲ್ಲಿ ಚರ್ಚೆ ಆಗುತ್ತಿದ್ದ ವಿಷಯಗಳು ಇಡೀ ದೇಶದ ಗಮನ ಸೆಳೆಯುತ್ತಿದ್ದವು. ಈಗಲೂ ಕರ್ನಾಟಕ ವಿಧಾನ ಮಂಡಲ ಸುದ್ದಿಯಾಗುತ್ತಿರುವುದು ಬೇರೆಯದೇ ತೆರನಾದ ವಿಷಯಕ್ಕೆ.
ಸದನದಲ್ಲಿ ಸದಸ್ಯರು ನಡೆದುಕೊಳ್ಳುವ ರೀತಿ ಅಸಹ್ಯ ಹುಟ್ಟಿಸುವಂತಿದೆ. ತಮಗೆ ಸದನದಲ್ಲಿ ಅವಮಾನ ಅಯಿತೆಂದು ತಮ್ಮ ಪ್ರಾಣವನ್ನೇ ಚಲಿಸುವ ರೈಲಿಗೆ ಬಲಿಕೊಟ್ಟ ಒಬ್ಬ ಸಂಭಾವಿತ ಹಿರಿಯ ಸದಸ್ಯರ ಘಟನೆ ಮಾಸಿಹೋಗುವ ಮುನ್ನ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಒಬ್ಬ ಸದಸ್ಯರು ಬಳಸಿದರು ಎನ್ನಲಾದ ಅವಾಚ್ಯ ಶಬ್ದದಿಂದ ಪೊಲೀಸ್ ಕಾನೂನು ಏನೆಲ್ಲಾ ಅಹಿತಕರ ಬೆಳವಣಿಗೆಗಳು ಜರುಗಿಹೋಯಿತು ಎಂಬುದೂ ಇತಿಹಾಸ. ಅಷ್ಟರಲ್ಲೇ ಈಗ ಹನಿಟ್ರ‍್ಯಾಪ್ ವಿಷಯ ಮುನ್ನೆಲೆಗೆ ಬಂದು ಇನ್ನೇನು ಸದನ ಮುಗಿಯಲು ಒಂದು ದಿನ ಇರುವಾಗ ಕೋಲಾಹಲ ಸೃಷ್ಟಿಯಾಗಿ ಸದನದಲ್ಲಿ ಮಸೂದೆಗಳ ಚರ್ಚೆ ಆಗದೇ ಹಾಗೆ ಅಂಗೀಕಾರಗೊಂಡವು.
ಇತ್ತ ವಿಧಾಸಭೆಯಲ್ಲಿ ಹದಿನೆಂಟು ಶಾಸಕರನ್ನು ಆರು ತಿಂಗಳು ಅಮಾನತ್ತು ಮಾಡಿ ಸ್ಪೀಕರ್ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ. ಅತ್ತ ತಮಗೆ ಸದನ ನಡೆಸಲು ಅಸಾಧ್ಯ ಎನ್ನುವ ಪರಿಸ್ಥಿತಿ ಬಂದೊದಗಿದೆ ಎನ್ನುವ ಕಾರಣ ಹೇಳಿ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಒಟ್ಟಾರೆ ವಿದಾನಸೌಧ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇದೆ. ವಿಧಾನಸಭಾ ಸಭಾಧ್ಯಕ್ಷರು ಬಿ.ಜೆ.ಪಿ ಪಕ್ಷದ ಹದಿನೆಂಟು ಸದಸ್ಯರನ್ನು ಆರು ತಿಂಗಳು ಅಮಾನತ್ತು ಮಾಡಿದ್ದಲ್ಲದೇ ಸದಸ್ಯರ ಸೌಲಭ್ಯಗಳನ್ನು ಕಡಿತ ಮಾಡುವದರ ಜೊತೆಗೆ ಯಾವ ಸಭೆಗಳಲ್ಲಿ ಪಾಲ್ಗೊಳ್ಳುವದಕ್ಕೆ ಕತ್ತರಿ ಹಾಕಿರುವದಲ್ಲದೇ ಯಾವುದೇ ಭತ್ಯೆಗಳನ್ನು ಪಡೆಯುವ ಅವಕಾಶಗಳನ್ನು ಕಸಿದುಕೊಂಡಿದ್ದಾರೆ.
ಬಿ.ಜೆ.ಪಿ. ಪಕ್ಷವು ಇದೇ ವಿಷಯ ಇಟ್ಟುಕೊಂಡು ರಾಜ್ಯದಾದ್ಯಂತ ಹೋರಾಟ ಮಾಡಲು ಮುಂದಾಗಿದೆ. ಇದರಲ್ಲಿ ಮುಸ್ಲಿಂ ಜನಾಂಗಕ್ಕೆ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಲು ಸರಕಾರ ಮುಂದಾಗಿರುವುದು ಕೂಡಾ ಬಿಜೆಪಿಯನ್ನು ಕೆಂಡವನ್ನಾಗಿಸಿದೆ. ಅತ್ತ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಲು ಮುಂದಾಗಿರುವುದು ಕೂಡಾ ಒಳ್ಳೆಯ ಬೆಳವಣಿಗೆ ಅಲ್ಲ. ಮೇಲ್ಮನೆ ಎಂದು ಕರೆಯಿಸಿಕೊಳ್ಳುವ ವಿಧಾನಪರಿಷತ್‌ನಲ್ಲಿಯೂ ಕೂಡಾ ಇಂತಹ ಬೆಳವಣಿಗೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಟ್ಟಾರೆ ರಾಜಕೀಯ ಪಡಸಾಲೆಯಲ್ಲಿ ಇಂತಹ ವಿಚಿತ್ರ ಬೆಳವಣಿಗೆಗಳು ಸಾರ್ವಜನಿಕರಲ್ಲಿ ವಿಭಿನ್ನ ರೀತಿಯಲ್ಲಿ ಚರ್ಚೆ ಆಗಲು ಅವಕಾಶ ಕೊಟ್ಟಂತಾಗಿದೆ.
ಸದನದಲ್ಲಿ ಸದಸ್ಯರು ಹೇಗೆ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ. ಕೇವಲ ಸುದ್ದಿಯಾಗಲು ಮಾತ್ರ ಅಥವಾ ಕಡತಕ್ಕೆ ಹೋಗಲು ಮಾತ್ರ ಸದಸ್ಯರು ಸದನದಲ್ಲಿ ಮಾತನಾಡುವಂತಾಗಿದೆ. ಬೆರಳಣಿಕೆ ಸದಸ್ಯರು ಮಾತ್ರ ಉಭಯ ಸದನಗಳಲ್ಲಿ ಚರ್ಚೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇನ್ನುಳಿದ ಬಹುತೇಕ ಸದಸ್ಯರು ತಮಗೂ ಸದನಕ್ಕೂ ಸಂಭಂದವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಹಿರಿಯ ಸದಸ್ಯರು ಸದನದಲ್ಲಿ ಮಾತಾಡುವಾಗ ಕೇಳಬೇಕು ಎನ್ನುವ ಕನಿಷ್ಠ ಜ್ಞಾನವೂ ಹಲವಾರು ಸದಸ್ಯರಿಗೆ ಇಲ್ಲದಂತೆ ನಡೆದುಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಉಭಯ ಸದನಗಳ ಪೀಠಾಧ್ಯಕ್ಷರು ಶಾಲಾ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಣ ಮಾಡಲು ಜೋರಾಗಿ ಕೂಗುವ ತರಗತಿಯ ಮಾಸ್ಟರ್ ರೀತಿಯಲ್ಲಿ ಕೂಗುವ ಪರಿಸ್ಥಿತಿ ಬಂದೊದಗಿದೆ.
ಇನ್ನು ಕೆಲ ಸದಸ್ಯರು ತಮ್ಮ ಜವಾಬ್ದಾರಿಯನ್ನು ಸಮರ್ಪಣಾ ಭಾವದಿಂದ ಪೂರೈಸುತ್ತಾರೆ. ಅಂತಹ ಸದಸ್ಯರ ಸಂಖ್ಯೆ ಎರಡಂಕಿಯೂ ದಾಟುವುದಿಲ್ಲ. ಈಗಾಗಲೇ ಈ ಹಿಂದೆ ವಿಧಾನಪರಿಷತ್‌ನಲ್ಲಿ ಇದ್ದ ಎಂ.ಸಿ. ನಾಣಯ್ಯ, ಎಂ.ಆರ್. ತಂಗಾ, ವಿ.ಎಸ್. ಆಚಾರ್ಯ, ವಿ.ಆರ್. ಸುದರ್ಶನ್, ಬಿ.ಎಲ್. ಶಂಕರ್, ರಮೇಶ್ ಬಾಬು ಇತ್ತ ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡ, ಕೋಣಂದೂರು ಲಿಂಗಪ್ಪ, ರಾಮಕೃಷ್ಣ ಹೆಗಡೆ, ದೇವೆಗೌಡ, ಸಿ.ಎಂ. ಇಬ್ರಾಹಿಂ, ನಂಜುಂಡೇಗೌಡ, ಎಂ.ಪಿ. ಪ್ರಕಾಶ್, ಪಿ.ಜಿ.ಆರ್ ಸಿಂಧ್ಯ, ಮಂಜುನಾಥ್ ನಜೀರ್ ಸಾಬ್, ವಾಟಾಳ್ ನಾಗರಾಜ್ ಹೀಗೆ ಹಿಂದಿನ ತಲೆಮಾರಿನ ಶಾಸಕರ ಸದನದಲ್ಲಿನ ವರ್ತನೆ, ಅವರುಗಳ ಚರ್ಚೆ, ಹೋರಾಟ ಕೇವಲ ನೆನಪು ಮಾತ್ರ ಎನ್ನುವಂತಾಗಿದೆ ಇಂದಿನ ಪರಿಸ್ಥಿತಿ.
ಸಭಾಪತಿ ಬಸವರಾಜ ಹೊರಟ್ಟಿ ಸದನದಲ್ಲಿ ಸದಸ್ಯರು ನಡೆದುಕೊಳ್ಳುವ ರೀತಿ ಅವರನ್ನು ರಾಜೀನಾಮೆ ಕೊಡುವ ಮಟ್ಟಿಗೆ ಬೇಸರ ತರಿಸಿದೆ ಎಂದರೆ ಅವರ ಮನಸ್ಸಿಗೆ ಎಷ್ಟು ನೋವಾಗಿರಬೇಕು. ಕಳೆದ ನಾಲ್ಕುವರೆ ದಶಕಗಳ ಅವರ ಸದನದಲ್ಲಿನ ನಡೆವಳಿಕೆ ಇತರರಿಗೆ ಮಾದರಿ. ಆದರೆ ಬೆಳಗಾವಿ ಸದನದಲ್ಲಿ ಜರುಗಿದ ಘಟನೆ ಮಾಸುವ ಮುನ್ನವೇ ಇತ್ತೀಚೆಗೆ ಜರುಗಿದ ಬಜೆಟ್ ಅಧಿವೇಶನದ ಸದನದಲ್ಲಿನ ಸದಸ್ಯರ ವರ್ತನೆಗಳು ಹೊರಟ್ಟಿಯವರ ಮನಸ್ಸಿಗೆ ಘಾಸಿ ತಂದಿರುವಂತಿದೆ. ಹಾಗಾಗಿ ಅವರು ರಾಜೀನಾಮೆ ಕೊಡುವ ಮಟ್ಟಿಗೆ ಬೇಸರಗೊಂಡಿದ್ದಾರೆ.
ಕೆಳಮನೆಯಲ್ಲಿ ಆಗಿರುವ ಗುಣಮಟ್ಟದ ಕುಸಿತ ಮೆಲ್ಮನೆಯಲ್ಲೂ ಮುಂದುವರೆಯುವ ಲಕ್ಷಣಗಳಿಂದ ಅವರು ತುಂಬಾ ಬೇಸರಗೊಂಡಂತಿದೆ. ಒಟ್ಟಾರೆ ಉಭಯ ಸದನಗಳ ಸದಸ್ಯರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದಲಿ, ಮುಂದೊಂದು ದಿನ ಜನರೇ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ.
– ಡಾ.ಬಸವರಾಜ ಧಾರವಾಡ.