ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಆನ್ಲೈನ್ನಲ್ಲಿ ಪ್ರಕಟವಾಗಿದೆ. ಬಳಿಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ karresults.nic.in ಮೂಲಕ ಪರಿಶೀಲಿಸಬಹುದು. ಸರ್ವರ್ ಸಮಸ್ಯೆ ಎದುರಾದಲ್ಲಿ ಡಿಜಿಲಾಕರ್ ಮೂಲಕವೂ ಫಲಿತಾಂಶ ವೀಕ್ಷಿಸಲು ಅವಕಾಶ ಇದೆ.
ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯದಾದ್ಯಂತ 1,217 ಕೇಂದ್ರಗಳಲ್ಲಿ ನಡೆಯಿತು. ಒಟ್ಟು 5,174 ಕಾಲೇಜುಗಳ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಇದಲ್ಲದೆ, ವಿಜ್ಞಾನ ವಿಭಾಗದಲ್ಲಿ 2.92 ಲಕ್ಷ, ವಾಣಿಜ್ಯದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ವೆಬ್ಸೈಟ್ಗೆ ತೆರಳಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ‘Submit’ ಬಟನ್ ಒತ್ತಿದರೆ ಅಂಕಪಟ್ಟಿ ಪರದೆ ಮೇಲೆ ಕಾಣಿಸುತ್ತದೆ.
ಇನ್ನು ಕರ್ನಾಟಕ ಒನ್ ಮೊಬೈಲ್ ಆಪ್ನಲ್ಲಿಯೂ ಫಲಿತಾಂಶ ಲಭ್ಯವಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕವೂ ಮಾಹಿತಿ ರವಾನೆಯಾಗುತ್ತದೆ.
ಈ ಬಾರಿ ಮೊದಲ ಬಾರಿಗೆ ಡಿಜಿಲಾಕರ್ ಪ್ಲಾಟ್ಫಾರ್ಮ್ನಲ್ಲಿಯೂ ಫಲಿತಾಂಶ ಲಭ್ಯವಾಗಿದ್ದು, ವಿದ್ಯಾರ್ಥಿಗಳು ಅಲ್ಲಿ ಕೂಡ ಅಂಕಪಟ್ಟಿಯನ್ನು ವೀಕ್ಷಿಸಬಹುದು.



