ಬೆಂಗಳೂರು: ಆಪರೇಷನ್ ಸಿಂಧೂರ್ ಸಫಲತೆ ಹಿಂದೆ ಕರ್ನಾಟಕದ ಯುವಕರ ಕೊಡುಗೆಯೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೆಲ್ಲೋ ಲೈನ್, ಮೂರನೇ ಹಂತದ ಮೆಟ್ರೋ ಯೋಜನೆ ಹಾಗೂ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು ನಗರದ ಆತ್ಮೀಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಹೇಳುತ್ತಾ ಮೋದಿ ಭಾಷಣ ಆರಂಭಿಸಿದರು. ಆಪರೇಷನ್ ಸಿಂಧೂರ್ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಆಪರೇಷನ್ ಸಿಂಧೂರ್ನಲ್ಲಿ ಭಾರತೀಯ ಸೇನೆಯ ಸಫಲತೆ ಹಾಗೂ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಹೋಗಿ ಉಗ್ರರ ನೆಲೆಗಳನ್ನು ನಾಶಪಡಿಸಿರುವುದು ಇಡೀ ದೇಶಕ್ಕೆ ಭಾರತದ ಹೊಸ ಸ್ವರೂಪದ ದರ್ಶನವನ್ನು ಮಾಡಿದಂತಾಗಿದೆ ಎಂದರು.
ಆಪರೇಷನ್ ಸಿಂಧೂರ್ ಸಫಲತೆ ಹಿಂದೆ ಟೆಕ್ನಾಲಜಿ ಇತ್ತು, ಡಿಫೆನ್ಸ್ನಲ್ಲಿ ಮೇಕ್ ಇನ್ ಇಂಡಿಯಾದ ತಾಕತ್ತಿತ್ತು, ಇದರಲ್ಲಿ ಬೆಂಗಳೂರು, ಕರ್ನಾಟಕದ ಯುವಕರ ಕೊಡುಗೆಯೂ ಇದೆ ಎಂದರು. ಮುಂದುವರೆದ ಆರ್ಥಿಕತೆಯಲ್ಲಿ ಟಾಪ್ ಹತ್ತರಲ್ಲಿ ಐದನೇ ಸ್ಥಾನದಲ್ಲಿದ್ದೇವೆ, ಶೀಘ್ರ ಟಾಪ್ ಮೂರನೇ ಸ್ಥಾನದಲ್ಲಿ ಭಾರತ ಇರಲಿದೆ. 2014ಕ್ಕೂ ಮೊದಲು ಕೇವಲ ಐದು ನಗರಗಳಿಗೆ ಮೆಟ್ರೋ ಸೀಮಿತವಾಗಿತ್ತು ಎಂದರು.