2025ರ ವರ್ಷ ಅಂತ್ಯವಾಗುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಕ್ರಿಕೆಟ್‌ಗೆ ದೊಡ್ಡ ಆಘಾತ ಎದುರಾಗಿದೆ.
ರಾಜ್ಯದ ಖ್ಯಾತ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ (37) ಅವರು ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, 14 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಆಫ್‌ಸ್ಪಿನ್ನರ್ ಹಾಗೂ ಕೆಳಕ್ರಮಾಂಕದ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಗೌತಮ್ 2012ರಲ್ಲಿ ರಣಜಿ ಟ್ರೋಫಿಯಿಂದ ತಮ್ಮ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದರು. 2016-17ರ ರಣಜಿ ಟ್ರೋಫಿಯಲ್ಲಿ 27 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದ ಅವರು, ಅದೇ ಆವೃತ್ತಿಯಲ್ಲಿ ಅಸ್ಸಾಂ ವಿರುದ್ಧ ಚೊಚ್ಚಲ ಶತಕವೂ ಸಿಡಿಸಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ 320ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿರುವ ಗೌತಮ್ 2021ರ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಪರ ಏಕೈಕ ಏಕದಿನ ಪಂದ್ಯವನ್ನಾಡಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಪ್ರತಿನಿಧಿಸಿದ್ದ ಅವರು, ಐಪಿಎಲ್ 2021 ಹರಾಜಿನಲ್ಲಿ 9.25 ಕೋಟಿ ರೂ.ಗೆ ಮಾರಾಟವಾಗಿದ್ದ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರರಾಗಿದ್ದರು.
ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಒಂದೇ ಪಂದ್ಯದಲ್ಲಿ 134 ರನ್ ಹಾಗೂ 8 ವಿಕೆಟ್‌ಗಳ ಅಪರೂಪದ ಸಾಧನೆಗೂ ಗೌತಮ್ ಹೆಸರುವಾಸಿಯಾಗಿದ್ದಾರೆ.



