ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಗುರು ಗಡ್ಡದೇವರಮಠದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಕಾರ್ತಿಕೋತ್ಸವ ಕಾರ್ಯಕ್ರಮ ನ.20ರಂದು ಸಂಜೆ 6.30ಕ್ಕೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಶ್ರೀಮಠದ ವಂಶಸ್ಥರು ಹಾಗೂ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ತಿಳಿಸಿದರು.
ಅವರು ಈ ಕುರಿತು ಮಂಗಳವಾರ ಗುರುಗಡ್ಡದೇವರ ಮಠದ ಆವರಣದಲ್ಲಿ ಮಾಹಿತಿ ನೀಡಿ, ಶ್ರೀಮಠವು ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿದ್ದು, ಈ ಭಾಗದ ಜನರ ಶ್ರದ್ಧಾ-ಭಕ್ತಿ ಕೇಂದ್ರವಾಗಿದೆ. ಇದು ಜಾಗೃತ ಮಠವಾಗಿದ್ದು, ಶ್ರೀಮಠದ ಭಕ್ತರು ತಾಲೂಕಿನ ಗೋವನಾಳ, ಗುಲಗಂಜಿಕೊಪ್ಪ, ಹರ್ಲಾಪೂರ ಮುಂತಾದ ಕಡೆ ಇದ್ದಾರೆ. ಗುರುಗಡ್ಡದೇವರಮಠ ಶ್ರೀಗಳು ಇಲ್ಲಿಯೇ ನೆಲೆನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಸಂಪ್ರದಾಯದಂತೆ ಗುರುವಾರ ಶ್ರೀಮಠದಲ್ಲಿ ಸಹಸ್ರ ದೀಪಗಳೊಂದಿಗೆ ಕಾರ್ತಿಕೋತ್ಸವವನ್ನು ವೈಭವದಿಂದ ಆಚರಿಸುವುದಾಗಿ ಹೇಳಿದರು.
ಕಾರ್ತಿಕೋತ್ಸವದಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯವನ್ನು ವಹಿಸಲಿದ್ದು, ಲಕ್ಷ್ಮೇಶ್ವರದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಈ ಕಾರ್ಯಕ್ರಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರುಗಳಾದ ಗಂಗಣ್ಣ ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಈಶ್ವರ, ಸುಜಾತಾ ದೊಡ್ಡಮನಿ, ಪುರಸಭೆ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಆಗಮಿಸುವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಬೆಂಡಿಗೇರಿ, ಚಂಬಣ್ಣ ಬಾಳಿಕಾಯಿ, ಈರಣ್ಣ ಅಂಕಲಕೋಟಿ, ಸುಭಾಸ ಓದುನವರ, ಕಿರಣ ನವಲೆ, ಶಿವಯೋಗಿ ಗಡ್ಡದೇವರಮಠ, ಎಂ.ಕೆ. ಕಳ್ಳಿಮಠ, ಮಲ್ಲಯ್ಯ ಭಕ್ತಿಮಠ, ವೆಂಕಟೇಶ ಮಾತಾಡೆ, ಪ್ರಕಾಶ ಕೊಂಚಿಗೇರಿಮಠ, ಮಲ್ಲನಗೌಡ ಪಾಟೀಲ, ಕೊಟ್ರಪ್ಪ ಮುಳಗುಂದ, ಆನಂದ ಲಿಂಗಶೆಟ್ಟಿ, ಶಿವಾನಂದ ಲಿಂಗಶೆಟ್ಟಿ, ಶಿವಯೋಗಿ ಗಡ್ಡದೇವರಮಠ, ಗುರುರಾಜ ಕೂಸನೂರಮಠ, ಪಂಚಯ್ಯ ಕೂಸನೂರಮಠ ಮುಂತಾದವರು ಹಾಜರಿದ್ದರು.
ಕಾರ್ತಿಕ ದೀಪೋತ್ಸವದ ನಂತರ ಚನ್ನಮ್ಮನವನ ಕಲ್ಯಾಣ ಮಂಟಪದಲ್ಲಿ ಸಭೆ ಜರುಗಲಿದ್ದು, ಶ್ರೀಗಳು, ಗಣ್ಯರು ಉಪಸ್ಥಿತರಿರಲಿದ್ದಾರೆ. ಈ ಬಾರಿ ವಿಶಿಷ್ಟವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಬೆಳಗಾವಿಯ ಬೀಟ್ಸ್ ಮೇಕರ್ಸ್ ಇವರಿಂದ ಸಂಗೀತ ನೃತ್ಯ ವೈಭವ ಹಾಗೂ ಹರ್ಲಾಪುರ ಸಾಂಬಯ್ಯ ಹಿರೇಮಠ ಅವರ ತಂಡದಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಾರ್ಯಕ್ರಮ ನಡೆಯಲಿದ್ದು ಶ್ರೀ ಗಡ್ಡಯ್ಯಸ್ವಾಮಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಜಿ.ಎಸ್. ಗಡ್ಡದೇವರಮಠ ತಿಳಿಸಿದರು.


