ಕರುಣ್ ನಾಯರ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕನ್ನಡಿಗನನ್ನು ಹಾಡಿ ಹೊಗಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲನ್ನು ಕಂಡಿದ್ದು, ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್ಗಳಲ್ಲಿ 193 ರನ್ಗಳಿಸಿ ಆಲೌಟ್ ಆಗಿದೆ.
ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು. ಗೆಲುವು ಯಾವಾಗಲೂ ವಿಶೇಷ, ವಿಶೇಷವಾಗಿ ಈ ರೀತಿಯ ಗೆಲುವುಗಳು ತುಂಬಾ ಖುಷಿ ನೀಡುತ್ತದೆ. ಏಕೆಂದರೆ ಒಂದು ಹಂತದಲ್ಲಿ ನಾವು ಪಂದ್ಯವನ್ನು ಕಳೆದುಕೊಂಡಿದ್ದೆವೆ.
ಕರುಣ್ ನಾಯರ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರ ಸಿಡಿಲಬ್ಬರದಿಂದಾಗಿ ಪಂದ್ಯವೇ ಕೈ ತಪ್ಪಿ ಹೋಯಿತು ಎಂದೇ ಭಾವಿಸಿದ್ದೆ. ಅಂತಹದೊಂದು ಇನಿಂಗ್ಸ್ ಅವರು ಆಡಿದ್ದರು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದಾಗ್ಯೂ ಕರ್ಣ್ ಶರ್ಮಾ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಬೌಂಡರಿ ಲೈನ್ಗಳು ಕೇವಲ 60 ಮೀಟರ್ ಉದ್ದವಿರುವಾಗ ಕೆಲ ಎಸೆತಗಳನ್ನು ಎಸೆಯಲು ದೈರ್ಯ ಬೇಕಿರುತ್ತದೆ. ಅದನ್ನು ಕರ್ಣ್ ಶರ್ಮಾ ಮಾಡಿ ತೋರಿಸಿದರು. ಇದರಿಂದಾಗಿ ನಾವು ಕಂಬ್ಯಾಕ್ ಮಾಡಲು ಸಾಧ್ಯವಾಯಿತು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.