ಚೆನ್ನೈ:- ಕರೂರು ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಯ್ ಅವರು ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಜಯ್, ಮೃತರ ಕುಟುಂಬಕ್ಕೆ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕಾಲ್ತುಳಿತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಟಿವಿಕೆ ಪಕ್ಷದ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.
‘ನಿನ್ನೆ ನಡೆದ ಘಟನೆಯಿಂದ ತೀವ್ರ ನೋವಾಗಿದೆ. ಅದನ್ನು ಹೇಗೆ ವಿವರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ಸಂತಾಪ ಸೂಚಿಸುತ್ತೇನೆ. ಏನೇ ಕೊಟ್ಟರೂ ಆಗಿರುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ಕುಟುಂಬದ ಸದಸ್ಯರಲ್ಲಿ ನಾನೂ ಒಬ್ಬನಾಗಿ ಮೃತರ ಕುಟುಂಬದವರಿಗೆ ತಲಾ 20 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುತ್ತೇನೆ’ ಎಂದು ವಿಜಯ್ ಪರಿಹಾರ ಘೋಷಿಸಿದ್ದಾರೆ.
ಆಗಿರುವ ನಷ್ಟಕ್ಕೆ ಹೋಲಿಸಿದರೆ ಇದು ದೊಡ್ಡ ಪರಿಹಾರದ ಮೊತ್ತವಲ್ಲ. ಆದರೂ ಕೂಡ ಕುಟುಂಬದ ಸದಸ್ಯನಾಗಿ ಈ ಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಗಾಯಗೊಂಡಿರುವ ನನ್ನ ಎಲ್ಲ ಬಂಧುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲ ಗಾಯಾಳುಗಳ ಚಿಕಿತ್ಸೆಗೆ ನೆರವು ನೀಡುವೆ’ ಎಂದು ದಳಪತಿ ವಿಜಯ್ ಅವರು ಟ್ವೀಟ್ ಮಾಡಿದ್ದಾರೆ.



