ನವದೆಹಲಿ: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ಸೋಮವಾರ (ಜ.12) ಸಿಬಿಐ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಅಧಿಕಾರಿಗಳು ಅವರನ್ನು ಏಳು ಗಂಟೆಗಳಿಗೂ ಅಧಿಕ ಕಾಲ ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ.
ಸಿಬಿಐ ಅಧಿಕಾರಿಗಳು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ವಿಜಯ್ ತಮ್ಮ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರು ಘಟನೆಗೆ ಕಾರಣರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಕಾಲ್ತುಳಿತದ ಬಳಿಕ ನಾನು ಅಲ್ಲಿಯೇ ಉಳಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಕಾರಣಕ್ಕೆ ಸ್ಥಳದಿಂದ ತೆರಳಿದ್ದೆ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ವಿಜಯ್ ನೀಡಿದ ಹೇಳಿಕೆಯನ್ನು ಸಿಬಿಐ ಅಧಿಕೃತವಾಗಿ ದಾಖಲಿಸಿಕೊಂಡಿದೆ.
ವಿಜಯ್ ಆಗಮನದ ಹಿನ್ನೆಲೆಯಲ್ಲಿ ಸಿಬಿಐ ಕಚೇರಿ ಎದುರು ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಆದರೂ ಅಭಿಮಾನಿಗಳು ಪ್ರತಿಭಟನೆ ನಡೆಸಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ಸೋಮವಾರ ಬೆಳಿಗ್ಗೆ 10:30ರ ಸುಮಾರಿಗೆ ವಿಜಯ್ ಚಾರ್ಟರ್ಡ್ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಪಕ್ಷ ಆಯೋಜಿಸಿದ್ದ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ನೀಡಿತ್ತು.
ಈ ನಡುವೆ ‘ಜನನಾಯಗನ್’ ಚಿತ್ರದ ಬಿಡುಗಡೆ ಕುರಿತ ವಿವಾದವೂ ಮುಂದುವರಿದಿದ್ದು, ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತುರ್ತು ವಿಚಾರಣೆ ನಡೆಸುವಂತೆ ಚಿತ್ರದ ನಿರ್ಮಾಪಕರು ನ್ಯಾಯಾಲಯ ಮೊರೆ ಹೋಗಿದ್ದಾರೆ.



