ನವದೆಹಲಿ: ತಮಿಳುನಾಡಿನ ಕರೂರ್ನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ವಿಜಯ್ ಅವರು ಸಿಬಿಐ ಮುಂದೆ ಮೂರನೇ ಸುತ್ತಿನ ವಿಚಾರಣೆಗೆ ಹಾಜರಾದರು. 2025ರ ಸೆಪ್ಟೆಂಬರ್ 27ರಂದು ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ವಿಜಯ್ ನಡೆಸಿದ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು.
ಈ ಪ್ರಕರಣದ ತನಿಖೆಯನ್ನು CBI ಕೈಗೊಂಡಿದೆ. ವಿಜಯ್ ರ್ಯಾಲಿಯಲ್ಲಿ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 10,000 ಜನರಿಗೆ ಮಾತ್ರ ಸಾಮರ್ಥ್ಯವಿದ್ದ ಸ್ಥಳದಲ್ಲಿ ಸುಮಾರು 27,000 ಮಂದಿ ಜಮಾಯಿಸಿದ್ದರೆಂದು ತಿಳಿದುಬಂದಿದೆ.
ಅಲ್ಲದೆ ಕಾರ್ಯಕ್ರಮ ಸ್ಥಳದಲ್ಲಿ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಮಾಡಲಾಗಿರಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಘಟನೆ ನಡೆದ ಸುಮಾರು ಒಂದು ತಿಂಗಳ ಬಳಿಕ, ಸ್ವತಂತ್ರ ತನಿಖೆ ಕೋರಿ ಟಿವಿಕೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ವಿಜಯ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಕರೂರ್ ಕಾರ್ಯಕ್ರಮವನ್ನು ಯಾರು ಆಯೋಜಿಸಿದರು, ಕುಡಿಯುವ ನೀರು, ನೈರ್ಮಲ್ಯ ಮತ್ತು ಭದ್ರತೆಯ ವ್ಯವಸ್ಥೆಗಳ ಬಗ್ಗೆ ಅವರಿಗೆ ಪೂರ್ವ ಮಾಹಿತಿ ಇದೆಯೇ, ಅವರು ಕಾರ್ಯಕ್ರಮ ಸ್ಥಳಕ್ಕೆ ತಡವಾಗಿ ಏಕೆ ಬಂದರು ಹಾಗೂ ಜನಸಂದಣಿಯನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಯಿತು ಎಂಬ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.



