ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸಮ್ಮೇಳನದ ಲೆಕ್ಕ ಮಂಡಿಸಿಲ್ಲ ಮತ್ತು ಸರ್ವಾಧಿಕಾರಿ ಧೋರಣೆ ಖಂಡಿಸಿ ಮೈಸೂರು ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಆಜೀವ ಸದಸ್ಯರ ಬಳಗದಿಂದ ಸಭೆ ನಡೆಯಿತು.
ಈ ವೇಳೆ ಆಜೀವ ಸದಸ್ಯ ಬಸವರಾಜ ಶೀಲವಂತರ ಮಾತನಾಡಿ, 2021-22ನೇ ಸಾಲಿನಲ್ಲಿ ಹೊಸದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರ ಸ್ವೀಕರಿಸಿ ಅಮರೇಶ್ ಗಾಣಗೇರ್ ಅವರು ತಾಲೂಕಿನ ಜವಾಬ್ದಾರಿ ಹೊತ್ತುಕೊಂಡ ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನಡೆಸದೇ, ಗ್ರಾಮ, ಹೋಬಳಿ ಘಟಕಗಳನ್ನು ಕ್ರೀಯಾಶೀಲವಾಗಿ ಕಟ್ಟದೇ, ಇಡೀ ತಾಲೂಕಿನಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ನಿಷ್ಕಿಯಗೊಳಿಸಿ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾ, ಹೆಸರಿಗೆ ಮಾತ್ರ ಎಂಬಂತಾಗಿದೆ. ತಮ್ಮ ಅಧಿಕಾರವನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇಡೀ ಸಮಿತಿ ನಿಷ್ಕಿಯಗೊಂಡಿದೆ. ಇಂತಹ ಸರ್ವಾಧಿಕಾರಿ ಧೋರಣೆಯ ಅಧ್ಯಕ್ಷರನ್ನು ಕೂಡಲೇ ಬದಲಾವಣೆ ಮಾಡುವಂತೆ ಒತ್ತಾಯಿಸಿದರು.
ಕಸಾಪ ಮಾಜಿ ಅಧ್ಯಕ್ಷ ಆರ್.ಕೆ. ಬಾಗವಾನ ಮಾತನಾಡಿ, ಗದಗ ಜಿಲ್ಲೆಯ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಾರ್ವಜನಿಕವಾಗಿ ಹಣ ಸಂಗ್ರಹ ಮಾಡಿದ್ದು, ಇದುವರೆಗೂ ಅದರ ಲೆಕ್ಕಪತ್ರವನ್ನು ನೀಡಿಲ್ಲ. ಜೊತೆಗೆ ಗಜೇಂದ್ರಗಡ ತಾಲ್ಲೂಕಿನ ಪ್ರಥಮ ಸಮ್ಮೇಳನ ಕಾಟಾಚಾರಕ್ಕೆ ಎಂಬತೆ ಮಾಡಿ ಮುಗಿಸಿ ಕೈತೊಳೆದುಕೊಂಡರು. ಅದರ ಬಗ್ಗೆಯೂ ಲೆಕ್ಕಪತ್ರವಿಲ್ಲ. ಕೂಡಲೇ ಈ ಬಗ್ಗೆ ಉತ್ತರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಆಜೀವ ಸದಸ್ಯ ಬಸವರಾಜ ಕೊಟಗಿ, ಎಂ.ಬಿ. ಸೊಂಪೂರ, ಗಣೇಶ ರಾಠೋಡ ಮಾತನಾಡಿದರು. ಹುಚ್ಚಪ್ಪ ಹಾವೇರಿ, ರೇಣುಕಾ ಇಟಗಿ, ಸುರೇಶ್ ಪತ್ತಾರ, ಚೈತ್ರಾ ವಿಶ್ವಬ್ರಾಹ್ಮಣ, ಮೌನೇಶ ವಿಶ್ವಬ್ರಾಹ್ಮಣ, ಉಸ್ಮಾನಗಣಿ ಹಿರೇಹಾಳ, ಕೆ.ಎಸ್. ಸಾಲಿಮಠ, ಮುರ್ತುಜಾ ಮಳಗಾವಿ, ಡಾ. ಮಹಾಂತೇಶ ಅಂಗಡಿ, ಶಿವಾಜಿ ಹೊರಪೇಟೆ, ಗವಿಸಿದ್ದಪ್ಪ ಭೋಸಲೆ, ರವಿಚಂದ್ರ ಗಾರ್ಗಿ, ಬಿ.ಎ. ಅಂಗಡಿ, ಮಹಾಂತೇಶ ಮಳಗಿ, ಲಿಲತಾ ವಿಶ್ವಬ್ರಾಹ್ಮಣ, ಶರಣಪ್ಪ ಪಟ್ಟೆದ, ವ್ಹಿ.ವ್ಹಿ. ನೂಲ್ವಿ, ಕೆ.ಎಸ್. ಜಂತ್ಲಿ ಸೇರಿದಂತೆ ಆಜೀವ ಸದಸ್ಯರು ಭಾಗವಹಿಸಿದ್ದರು.
ಕಸಾಪ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ, ಯಾವುದೇ ನಿರಂತರ ಕಾರ್ಯಕ್ರಮ ನಡೆಯದೇ, ಇಡೀ ಸಾಹಿತ್ಯ ವಲಯವನ್ನು ಕತ್ತಲೆಗೆ ದೂಡಿರುವುದು ಈ ಭಾಗದ ಸಾಹಿತ್ಯ ಪ್ರಿಯರಿಗೆ ಸಾಕಷ್ಟು ನೋವುಂಟುಮಾಡಿದೆ. ಹೀಗಾಗಿ ಆಜೀವ ಸದಸ್ಯರೆಲ್ಲ ಸೇರಿ ಚರ್ಚೆ ನಡೆಸಿ, ಈ ವಿಷಯಗಳಿಗೆ ಸಂಬಂಧಿಸಿದತೆ ಜಿಲ್ಲಾಧ್ಯಕ್ಷರು ಸ್ಪಷ್ಟೀಕರಣ ನೀಡುವಂತೆ ಚರ್ಚಿಸಲಾಗಿದೆ. ನಿಷ್ಕಿಯ ಅಧ್ಯಕ್ಷರನ್ನು ಬದಲಾವಣೆ ಮಾಡಿ, ಕ್ರಿಯಾಶೀಲ ಸಮಿತಿಯನ್ನು ರಚಿಸಲು ಒತ್ತಾಯಿಸಿದರು.



