ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕರ್ನಾಟಕ ವಿಶ್ವವಿದ್ಯಾಲಯದ 72ನೇ ಅಥ್ಲೆಟಿಕ್ಸ್ ಕ್ರೀಡಾಕೂಟವು ಇತ್ತೀಚೆಗೆ ಹೊನ್ನಾವರದ ಎಸ್‌ಡಿಎಂ ಮಹಾವಿದ್ಯಾಲಯದಲ್ಲಿ ಜರುಗಿತು. ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಶೇಷ ಸಾಧನೆಯನ್ನು ಮಾಡಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಎಸ್.ಜಿ. ಕೆಶಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎ-1ರಲ್ಲಿ ಓದುತ್ತಿರುವ ಕಾವ್ಯಾ ಅಬ್ಬಿಗೇರಿ 5000 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಹುಡುಗಿಯಾಗಿದ್ದಾಳೆ. ಹಾಗೆಯೇ 800 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕಕ್ಕೆ ಭಾಜನಳಾಗಿದ್ದಾಳೆ. ಬಿಸಿಎ 2ನೇ ವರ್ಷದಲ್ಲಿ ಓದುತ್ತಿರುವ ನೀಲಮ್ಮ ಗಿರಡ್ಡಿ ಎತ್ತರ ಜಿಗಿತದಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾಳೆ.
ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿಯರನ್ನು, ತರಬೇತುಗೊಳಿಸಿದ ದೈಹಿಕ ನಿರ್ದೇಶಕ ಗೌಡರ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಮುಂತಾದವರು ಅಭಿನಂದಿಸಿದ್ದಾರೆ ಎಂದು ಕೆಶಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


