ಗದಗ: ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದ ಕಲಾಪೋಷಕ ಕಾವ್ಯಂಶ್ರೀ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಗದಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಳಮಂಜಿ ವೆಂಕಟಗಿರುಯಪ್ಪ ಶ್ರೀನಿವಾಸ್ ಅವರು, ಚಿಕಿತ್ಸೆ ಫಲಿಸದೇ ನಿಧನಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಮೂಲದ ಕಾವ್ಯಂ ಶ್ರೀನಿವಾಸ್ ಅವರು,
ಗದಗ ನಗರದಲ್ಲೇ 34 ವರ್ಷದಿಂದ ವಾಸವಾಗಿದ್ದರು. ಕಲೆ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀನಿವಾಸ್ ಅವರು, ಅನೇಕ ಪತ್ರಿಕೆಗಳಲ್ಲಿ ಕಲೆ, ಸಾಹಿತ್ಯದ ಬಗ್ಗೆ ಬರಹ ಬರೆಯುತ್ತಿದ್ದರು. ಕಲಾ ಸೇವೆಯಲ್ಲಿ ತೊಡಗಿದ್ದ ಕಾವ್ಯಂಶ್ರೀ ಅವರು, ಜೊತೆಗೆ ಹೋಟೆಲ್ ಉದ್ಯಮವನ್ನು ಕೂಡ ಮಾಡುತ್ತಿದ್ದರು.
ಇನ್ನೂ 2022 ರಲ್ಲಿ ಮೋದಿಯವರ 96 ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾವ್ಯಂಶ್ರೀ ಹೆಸರು ಪ್ರಸ್ತಾಪಗೊಂಡಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾವ್ಯಂಶ್ರೀಯವರ 25 ವರ್ಷಗಳ ಕಲಾ ಸೇವೆಯನ್ನ ಶ್ಲಾಘಿಸಿದ್ದರು.
ಕಲೆ, ಸಂಸ್ಕೃತಿ ಉಳಿವಿಗಾಗಿ 1996 ರಲ್ಲಿ ಕಲಾ ಚೇತನ ಸಂಸ್ಥೆ ಸ್ಥಾಪಿಸಿದ್ದರು. ಅದಲ್ಲದೆ ಕಲಾ ಚೇತನ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಿರಂತರ ಕಾರ್ಯಕ್ರಮ ಆಯೋಜನೆ ಬಗ್ಗೆ ಪಿಎಂ ಸಂತಸ ವ್ಯಕ್ತ ಪಡಿಸಿದ್ದರು.