ಬೆಂಗಳೂರು: ಕೆಎಸ್‌ಡಿಎಲ್ ಹಾಗೂ ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ನಿಗದಿಯಾಗಿದ್ದ ಲಿಖಿತ ಪರೀಕ್ಷೆಗಳ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬದಲಾಯಿಸಿದೆ.
ಈ ಕುರಿತು ಮಾಹಿತಿ ನೀಡಿರುವ KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು, ಜನವರಿ 10 ಮತ್ತು 12ರಂದು ನಡೆಯಬೇಕಿದ್ದ ಪರೀಕ್ಷೆಗಳು ಇದೀಗ ಜನವರಿ 18ರಂದು ನಡೆಯಲಿವೆ. ಕೃಷಿ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಯ ಪರೀಕ್ಷೆಯನ್ನು ಜನವರಿ 10ರಂದು ನಡೆಸಲು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ನ ಕಿರಿಯ ಅಧಿಕಾರಿ ಹಾಗೂ ಕಿರಿಯ ಅಧಿಕಾರಿ ಹುದ್ದೆಗಳ ಪರೀಕ್ಷೆಯನ್ನು ಜನವರಿ 12ರಂದು ನಡೆಸಲು ನಿರ್ಧರಿಸಲಾಗಿತ್ತು.
ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಎರಡು ಪರೀಕ್ಷೆಗಳನ್ನೂ ಒಂದೇ ದಿನವಾದ ಜನವರಿ 18ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಜನವರಿ 19ಕ್ಕೆ ನಿಗದಿಯಾಗಿರುವ ಇತರೆ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ KEA ಅಧಿಕೃತ ವೆಬ್‌ಸೈಟ್‌ನ್ನು ಪರಿಶೀಲಿಸಬೇಕು ಎಂದು KEA ಕೋರಿದೆ.



