ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡುವ ರೂಢಿಯನ್ನು ತಪ್ಪಿಸದಿದ್ದಲ್ಲಿ ಮುಂದೊಂದು ದಿನ ಮಕ್ಕಳ ಭವಿಷ್ಯದ ಮೇಲೆ ಬಹು ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪಾಲಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಗದಗ ಐಎಂಎ ನಿಕಟಪೂರ್ವ ಅಧ್ಯಕ್ಷೆ, ಹಿರಿಯ ವೈದ್ಯೆ ಡಾ. ರಾಧಿಕಾ ಕುಲಕರ್ಣಿ ಹೇಳಿದರು.
ಅವರು ಗದುಗಿನ ಯುರೋ ಕಿಡ್ಸ್ ಪ್ರಿ-ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನ, ಪಾರಿತೋಷಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಕ ಮತ್ತು ಪೋಷಕರು ಮೊಬೈಲ್ ಮತ್ತು ಟಿವಿಯನ್ನು ಸಂಪರ್ಕ ಮತ್ತು ಜ್ಞಾನಕ್ಕಾಗಿ ಅವಶ್ಯ ಮತ್ತು ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಣ್ಣ ಮಕ್ಕಳಿಗೆ ಮೊಬೈಲ್ ನೋಡಲು ಕೊಡುವುದರಿಂದ ಕಾಲಕ್ರಮೇಣ ಮಕ್ಕಳು ಅದನ್ನು ಚಟವಾಗಿಸಿಕೊಳ್ಳುತ್ತಾರೆ. ಇದು ಮಕ್ಕಳ ಆರೋಗ್ಯ, ಬೆಳವಣಿಗೆ, ಭವಿಷ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಊಟ, ನಿದ್ದೆ, ಕಲಿಕೆ ಬಗ್ಗೆ ಆಸಕ್ತಿ ಇಲ್ಲದಂತಾಗುತ್ತದೆ ಎಂದರು.
ಯುರೋ ಕಿಡ್ಸ್ ಸ್ಕೂಲ್‌ನ ಅಧ್ಯಕ್ಷರಾದ ಹಿರಿಯ ವೈದ್ಯ ಡಾ. ಹನಮಂತ ಮಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಪ ಅವಧಿಯಲ್ಲಿ ನಮ್ಮ ಶಾಲೆ ಪಾಲಕ-ಪೋಷಕರ ಮೆಚ್ಚುಗೆಗೆ ಪಾತ್ರವಾಗಿ ಪ್ರಗತಿಯಲ್ಲಿ ಮುನ್ನಡೆದಿದ್ದು, ಬರಲಿರುವ ದಿನಗಳಲ್ಲಿ ಇನ್ನೂ ಉತ್ತಮ ರೀತಿಯ ಸೇವೆಗೆ ಸನ್ನದ್ಧಗೊಳ್ಳಲಿದೆ ಎಂದರು.
ಮುಖ್ಯ ಅತಿಥಿ ಡಾ. ರೇಣುಕಾ ಬಿನ್ನಾಳ ಮಾತನಾಡಿದರು. ಕಾರ್ಯದರ್ಶಿ ಡಾ. ಅರುಣಾ ಮಾಳಿ ವಾರ್ಷಿಕ ವರದಿ ವಾಚಿಸಿದರು, ವಿನ್ಸಂಟ್ ಪಾಟೀಲ ನಿರೂಪಿಸಿದರು. ಶ್ರೇಯಾ ಮಾಳಿ ವಂದಿಸಿದರು.
ಸಮಾರಂಭದಲ್ಲಿ ಡಾ. ಶ್ವೇತಾ ಸಂಕನೂರ, ಊರ್ಮಿಳಾ ಗುರುಪ್ರಸಾದ, ಮಾರುತಿ ಮಾಳಿ, ಶಿವಾನಂದ ಮಾಳಿ, ಮಮತಾ ಪಾಟೀಲ, ಅನಂತ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.



