ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ಕಳೆದುಹೋದ ಹಾಗೂ ಕಳ್ಳತನ ಮಾಡಿದ ಮೋಬೈಲ್‌ಗಳನ್ನು ಪತ್ತೆ ಮಾಡುವ ಕುರಿತು ಸಿ.ಇ.ಐ.ಆರ್ ಪೋರ್ಟಲ್‌ನ್ನು ಫೆಬ್ರವರಿ-2023ರಲ್ಲಿ ಜಾರಿಗೆ ತಂದಿದ್ದು, ಈ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಹಾಗೂ ಗದಗ ಜಿಲ್ಲೆಯಲ್ಲಿ ಮೊಟ್ಟ ಮೊದಲು ಮೋಚಿಫೈ ಅಪ್ಲಿಕೇಶನ್ ಅನ್ನು ಫೆಬ್ರವರಿ 15, 2023ರಂದು ಪ್ರಾರಂಭಗೊಳಿಸಿ ಇದರ ಸಹಾಯದಿಂದ 136 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದರು.
ಸಂಬಾಪುರ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಇಎನ್ ಠಾಣೆಯಿಂದ-18, ರೋಣ ಠಾಣೆ-14, ಬೆಟಗೇರಿ ಠಾಣೆ-4, ಎಕ್ಷನ್ ಠಾಣೆ -10, ಮುಂಡರಗಿ ಠಾಣೆ -21, ಗಜೇಂದ್ರಘಡ ಠಾಣೆ -13, ನರೇಗಲ್ ಠಾಣೆ -4, ನರಗುಂದ ಠಾಣೆ -25, ಗದಗ ರೂರಲ್ ಠಾಣೆ -11, ಗದಗ ಟೌನ್ ಠಾಣೆ -7, ಲಕ್ಷ್ಮೇಶ್ವರ ಠಾಣೆ 9 ಸೇರಿದಂತೆ ಒಟ್ಟು 136 ಮೊಬೈಲ್ ಪತ್ತೆಹಚ್ಚಲಾಗಿದ್ದು, ಶ್ರಮಿಸಿದ ಅಧಿಕಾರಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಎ.ಎಸ್.ಪಿ ಎಂ.ಬಿ. ಸಂಕದ್, ಗದಗ ಡಿ.ಎಸ್.ಪಿ ಮುರ್ತುಜಾ ಖಾದ್ರಿ, ನರಗುಂದ ಉಪ ವಿಭಾಗದ ಡಿ.ಎಸ್.ಪಿ ಪ್ರಭುಗೌಡ್ರ, ಗದಗ ಡಿ.ಎ.ಆರ್ ಡಿಎಸ್ಪಿ ವಿದ್ಯಾನಂದ ನಾಯಕ್, ಗದಗ ಶಹರ ಪಿ.ಐ ಡಿ.ವ್ಹಿ. ಪಾಟೀಲ, ಬೆಟಗೇರಿ ಸಿ.ಪಿ.ಐ ಧೀರಜ್ ಸಿಂಧೆ ಹಾಗೂ ಗ್ರಾಮಿಣ ಠಾಣೆಯ ಪಿ.ಐ. ಸಿದ್ದರಾಮೇಶ್ವರ ಸೇರಿದಂತೆ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ಗಜೇಂದ್ರಘಡ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಗತ್ಯ ತಂತ್ರಾಂಶ ಬಳಸಿಕೊಂಡು ಸ್ವತಃ ನಾವೇ ಸುಮಾರು 4,063 ದೂರುಗಳನ್ನು ದಾಖಲಿಸಿಕೊಂಡಿದ್ದೆವು. ಈವರೆಗೆ ರೂ 1,78,29,658 ಮೌಲ್ಯದ 1,121 ಮೊಬೈಲ್‌ಗಳನ್ನು ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ. ಗುರುವಾರ 24,70,530 ರೂ ಮೌಲ್ಯದ 136 ಮೊಬೈಲ್‌ಗಳನ್ನು ಸಾರ್ವಜನಿಕರಿಗೆ ಮರಳಿ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 2,03,00198 ರೂ ಮೌಲ್ಯದ 1,257 ಮೊಬೈಲ್‌ಗಳನ್ನು ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ. ಮುಂದೆ ಸಾರ್ವಜನಿಕರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಎಸ್‌ಪಿ ಬಿ.ಎಸ್. ನೇಮಗೌಡ ಕಿವಿಮಾತು ಹೇಳಿದರು.



