ವಿಜಯಸಾಕ್ಷಿ ಸುದ್ದಿ, ರೋಣ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ನಿಡಗುಂದಿಕೊಪ್ಪ ಶಿವಯೋಗಮಂದಿರದ ಪೂಜ್ಯರಾದ ಅಭಿನವ ಚೆನ್ನಬಸವ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಮಾರನಬಸರಿ ಗ್ರಾಮದ ಕೆರೆ ಅಭಿವೃದ್ಧಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಇಂದಿನ ದಿನಗಳಲ್ಲಿ ನೀರು ಸಂಗ್ರಹಣೆ ಅವಶ್ಯಕವಾಗಿದೆ. ಜೀವನ ಸವೆಸಲು ನೀರು ಬೇಕು, ಅಂತರ್ಜಲ ಹೆಚ್ಚಿಸಲು ನೀರು ಸಂಗ್ರಹ ಇರಬೇಕು. ಇದಕ್ಕೆ ಗ್ರಾಮಗಳಲ್ಲಿ ಕೆರೆಯಿರಬೇಕು. ಇದ್ದ ಕೆರೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು, ರಕ್ಷಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ವೀರಣ್ಣ ಮರಡಿ ಅಧ್ಯಕ್ಷತೆ ವಹಿಸಿದ್ದರು. ಯೋಗಿಶ ಎ, ಚಂದ್ರು ಮಾರನಬಸರಿ, ಶೇಖರಗೌಡ ಪಾಟೀಲ, ಅಂದಪ್ಪ ಮರಡಿ, ಶರಣಪ್ಪ ಕುರಿ, ಮರ್ತುಜಸಾಬ ಮೋತೆಖಾನ್, ಖಾಧಿರಸಾಬ ಕಳಕಾಪೂರ, ಕಾಶೀಮಸಾಬ ದೋಟಿಹಾಳ, ಶಿವಕುಮಾರ ದಿಂಡೂರ, ಈರಪ್ಪ ನಿಡಗುಂದಿ, ಅಲ್ಲಿಸಾಬ ಸವಡಿ, ಶಿವಪ್ಪ ಜಾಲಿಹಾಳ, ಶಿವಲಿಂಗಪ್ಪ ದಿಂಡೂರ, ಶಂಭುಗೌಡ ಪಾಟೀಲ, ಮುತ್ತಣ್ಣ ಭಜಂತ್ರಿ, ಶಂಕರಗೌಡ ಮಾಲಿಪಾಟೀಲ, ಶ್ರೀಶೈಲ ಶಾಂತಗೀರಮಠ, ಶ್ರೀಕಾಂತ ಕುಲಕರ್ಣಿ, ಅಲ್ಲಾಸಾಬ ಮೋತೆಖಾನ್, ದಿಲ್‌ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ವಿರೂಪಾಕ್ಷ ಅಂಗಡಿ, ಲಲಿತಾ ಮಾರನಬಸರಿ, ಪಿಡಿಒ ಎಸ್.ಆರ್. ಸಂಕನೂರ, ಮಹಾಬಲೇಶ್ವರ ಪಟಗಾರ ಸೇರಿದಂತೆ ಗ್ರಾಮದ ಧರ್ಮಸ್ಥಳ ಗುಂಪಿನ ಮಹಿಳೆಯರು ಉಪಸ್ಥಿತರಿದ್ದರು.
ನಿರ್ದೇಶಕ ಶಿವಾನಂದ ಆಚಾರ್ಯ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಕುಡಿಯುವ ನೀರಿನ ಕೆರೆಗಳ ಅಭಿವೃದ್ಧಿಗೆ 58 ಕೋಟಿ ರೂ ವೆಚ್ಚದಲ್ಲಿ 801 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಮಾರನಬಸರಿ ಗ್ರಾಮದ ಕೆರೆಯು 801ನೇ ಕೆರೆಯಾಗಿದ್ದು, ಸುಮಾರು 5 ಲಕ್ಷ ರೂಗಳನ್ನು ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರ ಅವಶ್ಯಕವಾಗಿದೆ ಎಂದರು.