ನವದೆಹಲಿ: ಯೆಮೆನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ನಾಳೆ ಯೆಮೆನ್ನಲ್ಲಿ ನಡೆಯಲಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಿಕೆ ಮಾಡಲಾಗಿದೆ. ಜುಲೈ 16ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನು ಯೆಮೆನ್ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.
ಈ ಪ್ರಕರಣಕ್ಕೆ ಕೊನೆ ಕ್ಷಣದವರೆಗೂ ನಿಮಿಷಾ ಪ್ರಿಯಾ ಪರ ಹೋರಾಟ ನಡೆಸುತ್ತಿದ್ದ ಕುಟುಂಬಸ್ಥರು ಹಾಗೂ ಆಕ್ಷನ್ ಕೌನ್ಸಿಲ್ಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಕೇರಳದ ಪಾಲಕ್ಕಾಡ್ನ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ, ತನ್ನ ಪಾರ್ಟ್ನರ್ ಕೊಲೆ ಆರೋಪದ ಮೇಲೆ 2017 ರಿಂದ ಯೆಮೆನ್ನಲ್ಲಿ ಜೈಲಿನಲ್ಲಿದ್ದಾರೆ.
2017ರಲ್ಲಿ ತನ್ನ ಯೆಮೆನ್ನ ವ್ಯವಹಾರ ಬ್ಯುಸಿನೆಸ್ ಪಾರ್ಟ್ನರ್ ಅಬ್ದೋ ಮಹ್ದಿ ಕೊಲೆಗೆ ಗಲ್ಲು ಶಿಕ್ಷೆಗೊಳಗಾದ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಮಾತುಕತೆಗಳು ನಡೆಯುತ್ತಿದೆ. ಯೆಮೆನ್ನಲ್ಲಿ ಶರಿಯಾ ಕಾನೂನಿನಡಿಯಲ್ಲಿ, ಬ್ಲಡ್ ಮನಿ ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಕಾನೂನುಬದ್ಧವಾದ ಆರ್ಥಿಕ ಪರಿಹಾರವಾಗಿದೆ.
ಮಾತುಕತೆಗಳನ್ನು ಸುಗಮಗೊಳಿಸಲು ಇಲ್ಲಿನ ಮುಸ್ಲಿಯಾರ್ ಅವರ ಪ್ರಧಾನ ಕಚೇರಿಯಲ್ಲಿ, ಪ್ರತ್ಯೇಕ ಕಚೇರಿಯನ್ನು ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ ಅವರಿಗೆ 2020 ರಲ್ಲಿ ಮರಣದಂಡನೆ ವಿಧಿಸಲಾಯಿತು ಮತ್ತು ಅವರ ಅಂತಿಮ ಮೇಲ್ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು. ನಿಮಿಷಾ ಕಡೆಯವರು 8.6 ಕೋಟಿ ರೂ. ನೀಡಲು ಸಿದ್ಧರಿದ್ದರು. ಆದರೆ ಮೃತ ವ್ಯಕ್ತಿಯ ಕಡೆಯವರು ಒಪ್ಪಿಕೊಂಡಿರಲಿಲ್ಲ.