ಬೆಂಗಳೂರು:- ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿಖಿಲ್, ಕೇತಗಾನಹಳ್ಳಿ ಜಮೀನಿನಲ್ಲಿ ಒಂದೇ ಒಂದು ಇಂಚು ಬೇರೆ ಅವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ. ಕಾಣದ ಕೈಗಳು ಕುಮಾರಸ್ವಾಮಿ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಯತ್ನ ಮಾಡುತ್ತಿವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಎಲ್ಲಾ ದಾಖಲಾತಿಗಳನ್ನ ಕಲೆ ಹಾಕಿದ್ದೇನೆ. ದಾಖಲಾತಿಗಳನ್ನ ನಾನು ನೋಡಿದ್ದೇನೆ. ಇದರ ಬಗ್ಗೆ ನಾನು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತೇನೆ. 46 ಎಕರೆ ಜಮೀನು ಕುಮಾರಸ್ವಾಮಿ ರೈತರಿಂದ ಖರೀದಿ ಮಾಡಿರೋ ಜಮೀನು. ಅದರಲ್ಲಿ ಸರ್ವೆ ನಂಬರ್ 7,8,9, ಇವು P ನಂಬರ್ ಜಮೀನು. ಪೋಡಿ ಆಗದ ಜಮೀನು. ಪೋಡಿ ಆಗದ ಜಮೀನು ತೆಗೆದುಕೊಳ್ಳೋದಕ್ಕೆ ಅವತ್ತು ಅವಕಾಶ ಇತ್ತು. ಪೋಡಿ ದುರಸ್ತಿ ಮಾಡೋಕೆ ಅದನ್ನು ಸರಿ ಮಾಡಬೇಕಿರೋದು ಸರ್ಕಾರ. ನಾವು ಅರ್ಜಿ ಕೊಟ್ಟರೂ ಸರ್ಕಾರ ಅದನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಸರ್ವೆ ನಂಬರ್ 7 ರಲ್ಲಿ 1 ಎಕರೆ ನಾವು ಅನುಭವದಲ್ಲಿ ಇದ್ದೇವೆ. ಉಳಿದ 4 ಎಕರೆ ಪೋಡಿ ದುರಸ್ತಿ ಮಾಡಬೇಕು. ಅದನ್ನ ಸರ್ಕಾರ ಮಾಡಬೇಕು. ರೈತರ ಜಮೀನು ಖರೀದಿ ಮಾಡಿದಾಗ ರೈತರು ಹಾಕಿದ್ದ ಬೌಂಡರಿಯನ್ನ ನಾವು ಹಾಗೇ ಉಳಿಸಿಕೊಂಡಿದ್ದೇವೆ. ಅರ್ಧ ಇಂಚು ಬೇರೆಯದಕ್ಕೆ ಬೇಲಿ ಹಾಕಿಲ್ಲ. ಸಿಎಂ ಆದಾಗ ಎಷ್ಟೋ ಜನರಿಗೆ ಸಾಗುವಳಿ ಚೀಟಿಯನ್ನ ಕೊಡಿಸಿದ್ದಾರೆ. ಎರಡು ಬಾರಿ ಸಿಎಂ ಆಗಿದ್ರು. ತಪ್ಪಿದ್ದರೆ ಆಗ ಸರಿ ಮಾಡಿಸಿಕೊಳ್ಳಬಹುದಿತ್ತು. ಆದರೆ ಅದನ್ನ ಮಾಡಿಲ್ಲ. ನೋಟಿಸ್ ಕೊಡದೇ ತೆರವು ಮಾಡುತ್ತೇನೆ ಎಂದು ಡಿಸಿ ಬಂದರೆ ಅದು ಕಾನೂನುಬಾಹಿರ. ಡಿಸಿ ಅವರು 14 ಎಕರೆ ಜಮೀನು ಒತ್ತುವರಿ ಆಗಿದೆ ಎನ್ನುತ್ತಾರೆ. ಯಾವ 14 ಎಕರೆ ಒತ್ತುವರಿ ಆಗಿದೆ ಎಂದು ಪ್ರಶ್ನಿಸಿದರು.
ಕಾಲ ಹೇಗಿದೆ ಅಂದರೆ ಆರೋಪ ಬಂದ ಕೂಡಲೆ ಅಪರಾಧಿ ಮಾಡುತ್ತಾರೆ. ರೀಲ್ಸ್, ಶಾರ್ಟ್ಸ್ ಕಾಲ ಇದು. ಅಂತಿಮವಾಗಿ ಕುಮಾರಸ್ವಾಮಿ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಬೇಕು, ಮಸಿ ಬಳಿಯಬೇಕು ಅಷ್ಟೇ ತಾನೆ ಅಂತಿಮ. ಇದರ ಹಿಂದೆ ಯಾರ‍್ಯಾರು ಇದ್ದಾರೆ ಎಂದು ಈಗ ಚರ್ಚೆ ಮಾಡಲ್ಲ. ಎಲ್ಲಾ ದಾಖಲಾತಿ ತೆಗೆಸಿದ್ದೇನೆ. ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ತಿಳಿಸಿದರು.