ನೆಲಮಂಗಲ: ನಾಗಸಂದ್ರದ ಪೂರನ್ ಜ್ಯುವೆಲರ್ಸ್‌ನಲ್ಲಿ ನಡೆದ ಗೋಲ್ಡ್ ಸ್ವಾಪ್ ಕಳ್ಳತನ ಪ್ರಕರಣ ಚಿನ್ನ ವ್ಯಾಪಾರಿಗಳಿಗೆ ಎಚ್ಚರಿಕೆಯ ಘಂಟೆ ಆಗಿದೆ. ಗ್ರಾಹಕನಂತೆ ಬಂದಿದ್ದ ಕಳ್ಳ, ಉಂಗುರ ತೂಕ ತೋರಿಸುವ ನೆಪದಲ್ಲಿ ಸಿಬ್ಬಂದಿಯ ಗಮನ ಹರಿಸಿ, ಸುಮಾರು 3 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣವನ್ನು ನಕಲಿ ಉಂಗುರದಿಂದ ಬದಲಿಸಿ ಪರಾರಿಯಾಗಿದ್ದಾನೆ.
ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಹಾಸನದ ಚನ್ನರಾಯಪಟ್ಟಣದಲ್ಲಿ ಮತ್ತೊಂದು ಕಳ್ಳತನ ಯತ್ನ ವಿಫಲವಾಗಿದೆ. ಕಾರಿನಲ್ಲಿ ಬಂದಿದ್ದ ಐವರು ಆರೋಪಿಗಳು ಮನೆಯ ಲಾಕ್ ಮುರಿಯಲು ಡ್ರ್ಯಾಗರ್ ಸೇರಿದಂತೆ ಉಪಕರಣಗಳನ್ನು ಬಳಸಲು ಮುಂದಾಗಿದ್ದರು. ಮನೆ ಮಾಲೀಕ ಸಂತೋಷ್ ಸಿಸಿಟಿವಿ ಅಲರ್ಟ್ ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಮೂವರು ಪರಾರಿಯಾಗಿದ್ದಾರೆ. ಒಬ್ಬನನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದಲ್ಲಿರುವ ಷಷ್ಠಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲೂ ಖದೀಮರು ಬೀಗ ಮುರಿದು ಗೋಲಕ ಒಡೆದು ಹಣ ಕಳವು ಮಾಡಿದ್ದಾರೆ. ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದೇ ದಿನ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.



