ಗದಗ:- ಒಂದು ಕಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ತಮ್ಮ ಮನೆ ಬಿಟ್ಟು ಊರನ್ನೇ ತೊರೆಯುತ್ತಿದ್ದಾರೆ. ಇನ್ನೊಂದು ಕಡೆ ಮೀಟರ್ ಬಡ್ಡಿ ದಂಧೆಗೆ ಹಲವರು ಸಾಲಗಾರರ ಕಿರುಕುಳಕ್ಕೆ ಒಳಗಾಗಿದ್ದು ಇನ್ನೂ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಅದರಂತೆ ಗದಗ ಜಿಲ್ಲೆಯಲ್ಲಿಯೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿ ಮೀರಿದೆ. ಹೀಗಾಗಿ ಇದರಿಂದ ಎಚ್ಚೆತ್ತ ಪೊಲೀಸ್ ಇಲಾಖೆಯು, ಮೀಟರ್ ಬಡ್ಡಿ ದಂಧೆಕೋರರಿಗೆ ಬೆಳ್ಳಂಬೆಳಗ್ಗೆ ಬಿಗ್ ಶಾಕ್ ಕೊಟ್ಟಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರ ಹಾಗೂ ಅವರಿಗೆ ಸಹಕಾರ ನೀಡುತ್ತಿದ್ದ ಸಂಗಮೇಶ ದೊಡ್ಡಣ್ಣವರ, ರವಿ ಕೌಜಗೇರಿ ಹಾಗೂ ಮಂಜುಳಾ ಗೋಕಾವಿ ಎನ್ನುವರು ಮನೆಗಳ ಮೇಲೆ ಹೆಚ್ಚುವರಿ ಎಸ್ಪಿ ಎಂ ಬಿ ಸಂಕದ, ಬೆಟಗೇರಿ ಸಿಪಿಐ ಧೀರಜ್ ಸಿಂಧೆ, ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ ಡಿ ಪಾಟೀಲ್ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ಬೆಳ್ಳಂ ಬೆಳಗ್ಗೆ ನಿದ್ದೆಯಲ್ಲಿದ್ದ ಬಡ್ಡಿ ದಂಧೆಕೋರರು ಕಂಗಾಲಾಗಿದ್ದಾರೆ. ದಾಳಿ ವೇಳೆ ಬಡ್ಡಿ ದಂಧೆಕೋರರ ಮನೆಗಳಲ್ಲಿ ಲಕ್ಷಾಂತರ ಹಣದ ಕಂತೆ, ಬಾಂಡ್, ಖಾಲಿ ಚೆಕ್ ಗಳು, ದಾಖಲೆಗಳು ಪತ್ತೆಯಾಗಿದೆ. ಸಂಗಮೇಶ ದೊಡ್ಡಣ್ಣವರ ಮನೆಯಲ್ಲಿ 26 ಲಕ್ಷ 57 ಸಾವಿರ ಲಕ್ಷ ನಗದು, ಖಾಲಿ ಬಾಂಡ್, ಚೆಕ್ ಗಳು ಪತ್ತೆಯಾಗಿದೆ.
ಮತ್ತೊಂದೆಡೆ ರವಿ ಕೌಜಗೇರಿ ಮನೆಯಲ್ಲಿ ಚೆಕ್ ಗಳು, ಬಾಂಡ್, ಪೇಪರ್ಸ್, ಹಣ ಎಣಿಸುವ ಮಷಿನ್ ಪತ್ತೆಯಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
ಅವಳಿ ನಗರದ 12 ಕಡೆಗಳಲ್ಲಿ ಏಕಕಾಲಕ್ಕೆ ಪೊಲೀಸರು ದಾಳಿ ನಡೆಸಿ, ಬಿಎನ್ಎಸ್ ಹಾಗೂ ಸೆಕ್ಯುರಿಟಿ ಪ್ರೋಸಿಡಿಂಗ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಕೆಲವು ರಿಜಿಸ್ಟರ್ ಮಾಡಿ ವ್ಯವಹಾರ, ಕೆಲವರು ಅನಧಿಕೃತ ಇದ್ದಾರೆ ಎಂಬುವುದು ಬೆಳಕಿಗೆ ಬಂದಿದೆ. ಸಾಲ ವಸೂಲಿ ಮಾಡಲು ಧಮ್ಕಿ, ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ದಾಳಿ ವೇಳೆ ದರ್ಶನ್ ಕೋರೆ, ಉಮೇಶ್ ಸುಂಕದ, ಉದಯ ಸುಂಕದ, ಶಿವರಾಜ್ ಹಂಸನೂರ, ಮಂಜುನಾಥ ಜಾಧವ್ ಹಾಗೂ ಭಜರಂಗ ಜಾಧವ್, ಮುತಗಾರ, ಶ್ಯಾಮ್ ಕುರಗೋಡ ಎಂಬ ರೌಡಿ ಶೀಟರ್‌ಗಳು ಬಡ್ಡಿ ದಂಧೆಯಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್ಪಿ ಬಿ.ಎಸ್
ನೇಮಗೌಡ ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಶಹರ ಪೊಲೀಸ್ ಠಾಣೆ, ಬೆಟಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.