ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಲ್ಯಾಪ್‌ಟಾಪ್ ಕಳ್ಳತನ ಮಾಡಿ, ಮತ್ತೆ ತಮಿಳುನಾಡಿಗೆ ತೆರಳಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇಬ್ಬರು ಆರೋಪಿಗಳ ಪೈಕಿ ಸದಾನಾಯ್ಡು ಎಂಬವನನ್ನು ಬಂಧಿಸಲಾಗಿದ್ದು, ಗಂಗಯ್ಯ ಎಂಬವವನಿಗಾಗಿ ಹುಡುಕಾಟ ನಡೆಸಿದ್ದು, ಇಬ್ಬರು ಸಹೋದರರು ಎಂದು ಗುರುತಿಸಲಾಗಿದೆ.
ಸ್ಕೂಟಿಯಲ್ಲಿ ತಮಿಳುನಾಡಿನ ಸೇಲಂನಿಂದ ಬಂದು ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದರು. ನಂತರ ಸ್ಕೂಟಿಯಲ್ಲಿ ಎಸ್ಕೇಪ್ ಆಗಿ ತಮಿಳುನಾಡಿನಲ್ಲಿ ಅರ್ಧ ಬೆಲೆಗೆ ಲ್ಯಾಪ್‌ಟಾಪ್ ಮಾರಾಟ ಮಾಡುತ್ತಿದ್ದರು.
ಈ ಹಿಂದೆ ಈ ಸಹೋದರರು ಗ್ಯಾಂಗ್ ಕಟ್ಟಿಕೊಂಡು ಲ್ಯಾಪ್‌ಟಾಪ್ ಕದಿಯುತ್ತಿದ್ದರು. ಆದರೆ ಒಂದು ಬಾರಿ ಬಂಧನವಾದ ಬಳಿಕ ಗ್ಯಾಂಗ್ ಸಹವಾಸ ಬಿಟ್ಟು ಇಬ್ಬರೇ ಕಳ್ಳತನಕ್ಕೆ ಇಳಿದಿದ್ದರು. ಸದ್ಯ ಸದಾನಾಯ್ಡುನನ್ನು ತಮಿಳುನಾಡಿನಲ್ಲಿ ಬಂಧನ ಮಾಡಿದ್ದು, ಗಂಗಯ್ಯನಿಗಾಗಿ ಜಯನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.



