ಹಾಸನ:- ಅಕ್ರಮ ಸಂಬಂಧಕ್ಕೆ ಅಡ್ಡಿ ಹಿನ್ನೆಲೆ ತನ್ನ ಪ್ರಿಯಕರನ ಜೊತೆ ಸೇರಿ ಪತ್ನಿಯೋರ್ವಳು ಸುಪಾರಿ ಕೊಟ್ಟು ಗಂಡನ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.
ಶುಕ್ರವಾರ ಮುಂಜಾನೆ ಚನ್ನರಾಯಪಟ್ಟಣದ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಪತಿ ನಂಜುಂಡೇಗೌಡ ಎಂಬವರ ಹತ್ಯೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಗ್ರಾಮಸ್ಥರು ನಂಜುಂಡೇಗೌಡರ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಯಲಾಗಿದೆ.
14 ವರ್ಷಗಳ ಹಿಂದೆ ನಂಜುಂಡೇಗೌಡರ ಮದುವೆಯಾಗಿತ್ತು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜೊತೆ ಕುಂಬಾರಹಳ್ಳಿಯಲ್ಲಿ ಅವರು ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಮಹಿಳೆ, ನಂತರ ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.
ಹೀಗಾಗಿ ಅರುಣ್ ಪತ್ನಿಯಿಂದ ದೂರವಿದ್ದ. ನಂತರ ಕುಟುಂಬಸ್ಥರ ರಾಜಿ ಸಂಧಾನ ಬಳಿಕ ಮತ್ತೆ ಒಂದಾಗಿ ಬಾಳುತ್ತಿದ್ದರು. ಆದರೆ ಹೆಂಡತಿಗೆ ಮಾತ್ರ ತನ್ನ ಪ್ರಿಯಕರನ ಹುಚ್ಚು ಬಿಟ್ಟಿರಲಿಲ್ಲ. ಹೀಗಾಗಿ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನ ಕೊಲೆ ಮಾಡಿಸಿರುವುದು ಪೋಲಿಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.