ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಡಿಸೆಂಬರ್ 25ರಂದು ತೆರೆಗೆ ಬರಲಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ದಾಖಲೆ ಮಟ್ಟದ ವೀಕ್ಷಣೆ ಪಡೆದುಕೊಂಡಿದೆ. ಕೆಲವೇ ಗಂಟೆಗಳಲ್ಲಿ ಟ್ರೇಲರ್ 15 ಮಿಲಿಯನ್ ವೀಕ್ಷಣೆ ಕಂಡಿದ್ದು, ಸಿನಿಪ್ರೇಮಿಗಳ ಗಮನ ಸೆಳೆದಿದೆ.
ಈ ವೀಕ್ಷಣೆ ಕುರಿತು ಕೆಲವರು ಅನುಮಾನ ವ್ಯಕ್ತಪಡಿಸಿದ್ದು, ಹಣ ಕೊಟ್ಟು ವೀಕ್ಷಣೆ ಹೆಚ್ಚಿಸಲಾಗಿದೆ ಎಂಬ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ಇಂತಹ ಮಾತುಗಳಿಗೆ ತಿರುಗೇಟು ನೀಡಿದ್ದಾರೆ. “ದಾಖಲೆ ಮಾಡೋದೇ ಗುರಿಯಾಗಿದ್ದರೆ ಇನ್ನೂ ದೊಡ್ಡ ಸಂಖ್ಯೆಗೆ ಹೋಗಬಹುದಿತ್ತು” ಎಂದು ಅವರು ಹೇಳಿದ್ದಾರೆ.
ಇದಕ್ಕೆ ಜೊತೆಗೆ, ಈ ರೀತಿಯ ಪ್ರಶ್ನೆ ಮಾಡುವವರು ಈ ಮೊದಲು ಅದೇ ಕೆಲಸ ಮಾಡಿರಬೇಕು ಎಂಬುದಾಗಿ ಸುದೀಪ್ ವ್ಯಂಗ್ಯವಾಡಿದ್ದಾರೆ. “ತಾವು ಮಾಡಿದದ್ದನ್ನೇ ಎಲ್ಲರಲ್ಲೂ ಕಾಣುತ್ತಾರೆ” ಎಂದು ಅವರು ಹೇಳಿದ್ದಾರೆ. ಸಿನಿಮಾ ಒಳ್ಳೆಯದಾಗಬೇಕು, ಪ್ರೇಕ್ಷಕರು ಥಿಯೇಟರ್ಗೆ ಬರಬೇಕು ಎಂಬುದೇ ತಮ್ಮ ಮುಖ್ಯ ಉದ್ದೇಶ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾಗಿದ್ದರೆ, ಈ ವರ್ಷ ‘ಮಾರ್ಕ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರು ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ‘ಮಾರ್ಕ್’ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.



