ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿದಿದ್ದು ಮತ್ತೊಂದು ಆವೃತ್ತಿಗೆ ತಯಾರಿಗಳು ಜೋರಾಗಿ ನಡೆಯುತ್ತಿವೆ. ಕಳೆದ ಬಾರಿ ಬಿಗ್ ಬಾಸ್ ಮುಗಿಯುತ್ತಿದ್ದಂತೆ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದರು. ಕನ್ನಡ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ಸುದೀಪ್ ಅವರು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ಊಹಿಸುವುದು ಅಸಾಧ್ಯ.
ಇದೀಗ ಕಿಚ್ಚ ಸುದೀಪ್ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಮತ್ತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲೇ ಮುಂದುವರಿಯಲಿದೆ. ಈ ಕುರಿತು ‘ಕಲರ್ಸ್ ಕನ್ನಡ’ ವಾಹಿನಿ ಘೋಷಣೆ ಮಾಡಿದೆ.
ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಈ ಬಾರಿಯ ಬಿಗ್ಬಾಸ್ ಸೀಸನ್ 12 ನಿರೂಪಣೆ ಮಾಡಲು ಕಿಚ್ಚ ಸುದೀಪ್ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಬಿಗ್ಬಾಸ್ ಟೀಮ್ ಮಾಹಿತಿ ನೀಡಿದೆ.
ಅಂದಹಾಗೆ ಈ ಬಾರಿಯ ರಿಯಾಲಿಟಿ ಶೋ ಯಾವ ರೀತಿಯಾದ ಕಾನ್ಸೆಪ್ಟ್‌ನಲ್ಲಿ ಮೂಡಿ ಬರಲಿದೆ..? ಯಾವ ರೀತಿಯಾದ ಸ್ಪರ್ಧಿಗಳಿಗೆ ಅವಕಾಶ ಸಿಗಲಿದೆ ಅನ್ನೋ ಬಗ್ಗೆ ಮಾಹಿತಿ ಕೂಡಾ ಹೊರಬೀಳಲಿದೆ. ಅಲ್ಲದೇ ಕೆಲವರ ಹೆಸರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.