ಬೆಂಗಳೂರು:- ಟ್ಯೂಷನ್ ನಿಂದ ಬರುತ್ತಿದ್ದ ಬಾಲಕನನ್ನು ಕಿಡ್ನಾಪ್ ಮಾಡಿ ಬಳಿಕ ಬರ್ಬರ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ನಿಶ್ಚಿತ್ ಕೊಲೆಯಾದ ಬಾಲಕ. ಟ್ಯೂಷನ್ ಮುಗಿಸಿ ಬರುತ್ತಿದ್ದ ಬಾಲಕ ನಿನ್ನೆ(ಬುಧವಾರ) ರಾತ್ರಿ ಅರಕೆರೆ ಶಾಂತಿನಿಕೇತನ ಬಡವಣೆಯಿಂದ ಕಿಡ್ನಾಪ್ ಆಗಿದ್ದ. ನಿಶ್ಚಿತ್ ತಂದೆ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ಹೀಗಾಗಿ ಬಾಲಕನನ್ನು ಕಿಡ್ನ್ಯಾಪ್ ಮಾಡಿ ಆರೋಪಿಗಳು, 5 ಲಕ್ಷಕ್ಕೆ ಡಿಮ್ಯಾಂಡ್ ಹಾಕಿದ್ದರು. ಕಿಡ್ನ್ಯಾಪರ್ಸ್ ಕಡೆಯಿಂದ ಫೋನ್ ಬರ್ತಿದ್ದಂತೆ ಹುಳಿಮಾವು ಠಾಣೆಗೆ ನಿಶ್ಚಿತ್ ಪೋಷಕರು ದೂರು ಕೊಟ್ಟಿದ್ದಾರೆ.
ದೂರಿನ ಅನ್ವಯ ನಿನ್ನೆ ರಾತ್ರಿಯೇ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಕಿಡ್ನಾಪರ್ಸ್ ಗೆ ಶೋಧ ನಡೆದಿತ್ತು. ಅಲ್ಲದೇ ಪೊಲೀಸರು ಲೊಕೇಶನ್ ಟ್ರೇಸ್ ಮಾಡಿ ಕಿಡ್ನಾಪರ್ಸ್ ಗಾಗಿ ತೀವ್ರ ಹುಡುಕಾಟ ನಡೆಸಿದರು. ಮತ್ತೊಂದೆಡೆ 5 ಲಕ್ಷ ಕೈಯಲ್ಲಿಡಿದು ಪೋಷಕರು ಕಾದಿದ್ದರು. ಆದ್ರೆ ಇಂದು(ಗುರುವಾರ) ಸಂಜೆ 5 ಗಂಟೆ ಸುಮಾರಿಗೆ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹುಳಿಮಾವು ಪೊಲೀಸರಿಂದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.