ಕೋಲಾರ:-ಕೇವಲ 2 ರೂಪಾಯಿ ಬೆಂಕಿ ಪೊಟ್ಟಣಕ್ಕಾಗಿ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಒಂದು ವಾರದ ಹಿಂದೆ ಕೋಲಾರ ತಾಲ್ಲೂಕು ಹರಟಿ ಅರಣ್ಯ ಪ್ರದೇಶದಲ್ಲಿ ಈ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದ ಇಬ್ಬರನ್ನು ಇದೀಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಗಣೇಶ್ ಮತ್ತು ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೋಲಾರ ಎಸ್ಪಿ ನಿಖಿಲ್ ಸ್ಪಷ್ಟನೆ ಕೊಟ್ಟಿದ್ದಾರೆ.
ಒಂದು ವಾರದ ಹಿಂದೆ ಬೆಂಕಿ ಪೊಟ್ಟಣಕ್ಕಾಗಿ ಮೊದಲು ಮೂವರ ಮಧ್ಯೆ ಜಗಳ ಶುರುವಾಗಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ ಹರಟಿ ಗ್ರಾಮದ 28 ವರ್ಷದ ಶಂಕರ್ ನಾಗ್ ಎಂಬಾತನ ತಲೆಗೆ ಬಾಟಲ್ ನಿಂದ ಹೊಡೆದು ಗಣೇಶ್ ಮತ್ತು ಲಕ್ಷ್ಮಣ್ ಇಬ್ಬರು ಎಸ್ಕೇಪ್ ಆಗಿದ್ದರು. ಮೃತ ವ್ಯಕ್ತಿ ಮತ್ತು ಬಂಧಿತರು ಗಾರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕುಡಿದ ಮತ್ತಿನಲ್ಲಿ ಬೆಂಕಿ ಪೊಟ್ಟಣಕ್ಕಾಗಿ ಜಗಳ ತೆಗೆದು ಶಂಕರ್ ನಾಗ್ ನನ್ನು ಕೊಲೆ ಮಾಡಿ ಬಳಿಕ ಪೆಟ್ರೋಲ್ ಹಾಕಿ ಸುಟ್ಟಿ ಆರೋಪಿಗಳು ಎಸ್ಕೇಪ್ ಆಗಿದ್ದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೋಲಾರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.