ಬೆಂಗಳೂರು: ಯುಗಾದಿ ಹಬ್ಬದ ವೇಳೆಯೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ KMF ಕ್ಕೂ ಸಂಕಷ್ಟ ಎದುರಾಗಿದೆ.
ಇತ್ತೀಚಿನ ಇರಾನ್-ಇಸ್ರೇಲ್ ಸೇನಾ ಸಂಘರ್ಷ ಹಾಗೂ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆ ಪರಿಣಾಮ ನಂದಿನಿ ಉತ್ಪನ್ನಗಳ ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ, ಕೆಎಂಎಫ್ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ. ಸಾಮಾನ್ಯವಾಗಿ ತಿಂಗಳಿಗೆ 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ಕೆಎಂಎಫ್, ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳ ಮಾಹಿತಿ ಪ್ರಕಾರ, ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಮತ್ತೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ. ಮಾರ್ಚ್ 20ರೊಳಗೆ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಹಾಲು, ಸಿಹಿ-ಖಾರದ ತಿಂಡಿಗಳ ತಯಾರಿಕೆ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ದಕ್ಷಿಣ ಭಾರತದ ಪ್ರಮುಖ ಹಾಲು ಸಹಕಾರ ಒಕ್ಕೂಟವಾಗಿರುವ ಕೆಎಂಎಫ್, ವಾರ್ಷಿಕವಾಗಿ ₹25,000–30,000 ಕೋಟಿ ವಹಿವಾಟು ನಡೆಸುತ್ತದೆ. ದಿನಕ್ಕೆ ಸರಾಸರಿ 85–90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 40 ಲಕ್ಷ ಲೀಟರ್‌ಗಿಂತ ಹೆಚ್ಚು ಹಾಲು ಮಾರಾಟವಾಗುತ್ತದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್‌ಗಳಂತೆ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ.
ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತದೆ. ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟ ಹೆಚ್ಚಾಗುವುದರಿಂದ, ಪ್ರಸ್ತುತ ಗ್ಯಾಸ್ ಕೊರತೆ ಈ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕವನ್ನು ಉಂಟುಮಾಡುತ್ತಿದೆ.



