ಬೆಂಗಳೂರು: ಐಪಿಎಲ್ ಹಬ್ಬದ ಸಂಭ್ರಮ ಶುರುವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ ಕನ್ನಡಿಗರ ಹೆಮ್ಮೆಯ ಕೆಎಂಎಫ್ 2026ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಗೆ ಪ್ರಾಯೋಜಕತ್ವ ನೀಡಿದ್ದು, ನಂದಿನಿ ಉತ್ಪನ್ನಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವೇದಿಕೆ ಸಿಕ್ಕಂತಾಗಿದೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ, 2026ರ ಆವೃತ್ತಿಯಲ್ಲಿ ಆರ್‌ಸಿಬಿಗೆ KMF ಪ್ರಾಯೋಜಕತ್ವ ನೀಡಿದೆ. ಈ ಮೂಲಕ ನಂದಿನಿ ಉತ್ಪನ್ನಗಳು ದೇಶಕ್ಕೆ ಪರಿಚಯವಾಗಲಿದೆ. ಆರ್ಸಿಬಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ, ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಉತ್ಪನ್ನ ಪರಿಚಯವಾಗಲಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ತ ಪಡಿಕಲ್ರಿಂದ KMF ಉತ್ಪನ್ನ ಪ್ರಚಾರಕ್ಕೆ ಮುಂದಾಗಿದ್ದೇವೆ. 4 ಕೋಟಿ ರೂ ವೆಚ್ಚದಲ್ಲಿ KMF ಒಂದು ವರ್ಷದ ಟೆಂಡರ್ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್, ಕಳೆದ ಐಪಿಎಲ್ ಸೀಸನ್‌ನ ಚಾಂಪಿಯನ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಆರ್‌ಸಿಬಿಯ ಕ್ರೀಡಾ ಬದ್ಧತೆ ಈ ಬಾರಿಯ ಐಪಿಎಲ್‌ನ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ ಎಂದಿದ್ದಾರೆ.



