ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ ಮುಂಬೈ ನಗರವನ್ನೇ ಬೆಚ್ಚಿ ಬೀಳಿಸಿದೆ. ಗುರುವಾರ ನಸುಕಿನ ಜಾವ ಸೈಫ್ ಮನಗೆ ನುಗ್ಗಿದ ದುಷ್ಕರ್ಮಿಗಳು ಸೈಫ್ ಗೆ ಆರು ಕಡೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣದ ತನಿಖೆಗೆ ಕರ್ನಾಟಕದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಎಂಟ್ರಿಕೊಟ್ಟಿದ್ದಾರೆ.
ಮುಂಬೈ ಭೂಗತ ಲೋಕವನ್ನೇ ನುಡುಗಿಸಿರುವ ಎನ್ಕೌಂಟರ್ ದಯಾನಾಯಕ್ ಅವರು ಸೈಫ್ ಅಲಿ ಖಾನ್ ಪ್ರಕರಣಕ್ಕೆ ಎಂಟ್ರಿ ನೀಡಿದ್ದಾರೆ. ಎನ್ಕೌಂಟರ್ ದಯಾನಾಯಕ್ ಅವರು ಇಂದು (ಜನವರಿ 17) ಸೈಫ್ ಅಲಿ ಖಾನ್ ಅನ್ನು ದಾಖಲು ಮಾಡಿರುವ ಲೀಲಾವತಿ ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೂ ಮುಂಚೆ ಅವರು ಸೈಫ್ ಅಲಿ ಖಾನ್ ಅವರ ಬಾಂದ್ರಾದ ಮನೆಗೂ ಭೇಟಿ ನೀಡಿದ್ದು ಅಲ್ಲಿಯೂ ಸಹ ತನಿಖೆ ನಡೆಸಿದ್ದಾರೆ.
ಜನವರಿ 16 ರಂದು ಹಲವು ಪೊಲೀಸ್ ಅಧಿಕಾರಿಗಳು ಸೈಫ್ ಅಲಿ ಖಾನ್ ಅವರ ಬಾಂದ್ರಾದ ಅಪಾರ್ಟ್ಮೆಂಟ್ಗೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ವೇಳೆ ಎನ್ಕೌಂಟರ್ ದಯಾನಾಯಕ್ ಸಹ ಆಗಮಿಸಿದ್ದರು. ಸೈಪ್ ಅಲಿ ಖಾನ್ ಪ್ರಕರಣದ ತನಿಖೆಗೆ ಮಾಡಲಾಗಿರುವ ಏಳು ತಂಡಗಳಲ್ಲಿ ಒಂದು ತಂಡದ ಜವಾಬ್ದಾರಿ ಎನ್ಕೌಂಟರ್ ದಯಾನಾಯಕ್ ಅವರು ವಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕದ ಉಡುಪಿಯವರಾದ ದಯಾನಾಯಕ್ ಸಣ್ಣ ವಯಸ್ಸಿನಲ್ಲೇ ಮುಂಬೈಗೆ ಹೋಗಿ ಅಲ್ಲಿ ಕೆಲಸ ಮಾಡಲು ಆರಂಭಿಸಿದರು. ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಘಳಿಸಿರುವ ದಯಾ ನಾಯಕ್ ಭೂಗತ ಪಾತಕಿಗಳಿಗೆ ದುಸ್ವಪ್ನವಾಗಿ ಕಾಡಲು ಆರಂಭಿಸಿದರು. ಚೋಟಾ ರಾಜನ್, ಚೋಟಾ ಶಕೀಲ್ ಇನ್ನಿತರೆ ಕೆಲವು ಪಾತಕಿಗಳ ಕಡೆಯವರನ್ನು ಸಿಕ್ಕ-ಸಿಕ್ಕಲ್ಲಿ ಕೊಂದು ಸುದ್ದಿಯಾದರು. ಆದರೆ ಅವರ ವಿರುದ್ಧವೂ ಕೆಲ ಪ್ರಕರಣಗಳು ಜಾರಿಯಲ್ಲಿದ್ದು, ಒಮ್ಮೆ ಬಂಧನಕ್ಕೂ ಒಳಗಾಗಿದ್ದರು. ಆದರೆ ಪ್ರಕರಣ ಖುಲಾಸೆಯಾಗಿ ಮತ್ತೆ ಪೊಲೀಸ್ ಇಲಾಖೆ ಸೇರಿದ್ದಾರೆ. ಈಗ ಕಮೀಷನರ್ ಆಗಿರುವ ದಯಾನಾಯಕ್, ಸೈಫ್ ಅಲಿ ಖಾನ್ ಪ್ರಕರಣದ ಜವಾಬ್ದಾರಿ ವಹಿಸಿಕೊಂಡಿ ಸದ್ಯದಲ್ಲೇ ಆರೋಪಿಯ ಹೆಡೆ ಮುರಿ ಕಟ್ಟಲು ನಿರ್ಧರಿಸಿದ್ದಾರೆ.