ವಿಜಯಸಾಕ್ಷಿ ಸುದ್ದಿ, ಗದಗ : ಗದಗ ತಾಲೂಕಿನ ಅಂತುರ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಗೆ ಗದಗ ಜಿ.ಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ನರೇಗಾ ಯೋಜನೆಯ `ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ’ ಎಂಬ ಅಭಿಯಾನದಡಿ ಏಪ್ರಿಲ್ 1ರಿಂದ ಮೇ ಅಂತ್ಯದವರೆಗೆ ನರೇಗಾ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡುವ ಬಗ್ಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ಪಡೆದ ಉದ್ಯೋಗ ಚೀಟಿಯ ಮಹತ್ವ ತಿಳಿದು, ದೊರೆಯುವ ಸೌಲಭ್ಯವನ್ನು ಪಡೆಯಲು ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು. ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು. ಅಳತೆಗೆ ತಕ್ಕಂತೆ ಕೆಲಸ ನಿರ್ವಹಣೆ ಮಾಡಿದರೆ ಮಾತ್ರ ಪೂರ್ಣ ಪ್ರಮಾಣದ ಕೂಲಿ ಮೊತ್ತ ಲಭ್ಯವಾಗುತ್ತದೆ ಎಂದು ತಿಳಿಸಿದರು.
2024 ರ ಲೋಕಸಭೆ ಚುನಾವಣೆ ಪ್ರಯುಕ್ತ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಕೂಡ ಮತದಾನ ಮಾಡುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. ಮತದಾನ ಪ್ರಕ್ರಿಯೆಯಿಂದ ಯಾವೊಬ್ಬ ವ್ಯಕ್ತಿಯೂ ಕೂಡ ಹೊರಗುಳಿಯಬಾರದು ಎಂದು ತಿಳಿಸಿದರು.
ಪಿಡಿಓ ಎಚ್.ಎಸ್. ಚಟ್ರಿ ಹಾಜರಿದ್ದ ಸಿಬ್ಬಂದಿಗಳಿಗೆ ಹಾಗೂ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ಕುಮಾರ್ ಪೂಜಾರ್, ಜಿ.ಪಂ ನರೇಗಾ ಸಿಬ್ಬಂದಿಗಳಾದ ಎಡಿಪಿಸಿ ಕಿರಣ್ ಕುಮಾರ್, ಡಿಎಮ್‌ಆಯ್‌ಎಸ್ ಮಲ್ಲಿಕಾರ್ಜುನ ಸರ್ವಿ, ಡಿಐಇಸಿ ವಿ.ಎಸ್. ಸಜ್ಜನ ಹಾಗೂ ತಾಲೂಕು ನರೇಗಾ ಸಿಬ್ಬಂದಿ ಟಿ.ಐ.ಇ.ಸಿ ವೀರೇಶ್, ಬಿ.ಎಫ್.ಟಿ ದಾವಲ್ ಮತ್ತು ನರೇಗಾ ಕೂಲಿಕಾರರು ಹಾಜರಿದ್ದರು.