ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರೀತಿಯ ಸ್ಪರ್ಶವಿಲ್ಲದೆ ಈ ಜಗತ್ತಿನಲ್ಲಿ ಏನೂ ಸಾಧ್ಯವಿಲ್ಲ. ನಾವು ವ್ಯವಹರಿಸುವ ಪ್ರತಿಯೊಂದರಲ್ಲಿಯೂ ಪ್ರೀತಿ ಇರುವುದರಿಂದ ಜಗತ್ತು ಇಷ್ಟೊಂದು ಸುಂದರವಾಗಿ ನಡೆಯುತ್ತಿದೆ ಎಂದು ಕವಿವಿ ಧಾರವಾಡದ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಸಕ್ತ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ದೀಪವು ಕೇವಲ ಬೆಳಕನ್ನು ನೀಡುವ ವಸ್ತುವಲ್ಲ. ಅದು ಜ್ಞಾನದ ಸಂಕೇತವೂ ಹೌದು. ಮನುಷ್ಯ ಜ್ಞಾನವಿಲ್ಲದೆ ಈ ಭೂಮಿಯ ಮೇಲೆ ಬದುಕಲಾರ. ಜ್ಞಾನವು ನಮ್ಮ ಅಂತರಂಗವನ್ನೂ ಸಹ ಬೆಳಗುವ ಮಹಾನ್ ವಸ್ತುವಾಗಿದೆ. ಇದರ ಸಂಕೇತವಾಗಿ ನಾವು ಸಭೆ-ಸಮಾರಂಭಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸುತ್ತೇವೆ ಎಂದರು.
ನಿಮ್ಮಲ್ಲಿ ಒಂದೊಂದು ಪ್ರತಿಭೆಯಿದೆ. ಈ ಪ್ರತಿಭೆ ಏನು ಎಂಬುದನ್ನು ನೀವು ಮೊದಲು ಮನಗಾಣಬೇಕು. ನಿಮ್ಮಲ್ಲಿನ ಹೃದಯದ ಪ್ರಣತಿಯು ಸದಾ ಉರಿಯುತ್ತಿರುವಂತೆ ಮಾಡಬೇಕು. ಅದರಲ್ಲಿ ಯಾವಾಗಲೂ ದಯೆ, ಕರುಣೆ, ಪ್ರೀತಿ ಎಂಬಿತ್ಯಾದಿ ಮೌಲ್ಯಗಳನ್ನು ತುಂಬಿರಬೇಕು. ಇಂತಹ ಮೌಲ್ಯಗಳನ್ನು ನಿಮಗೆ ಶ್ರೀಗಳು ಸದಾಕಾಲ ನೀಡುತ್ತಾರೆ ಎಂದು ಮಟ್ಟಿಹಾಳ ಹೇಳಿದರು.
ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ದೀಪವು ಅಂಧಕಾರವನ್ನು ಕಳೆದು ಜ್ಞಾನವನ್ನು ತುಂಬುತ್ತದೆ. ಹೃದಯದಲ್ಲಿ ಜ್ಞಾನದ ಬೆಳಕು ಇಲ್ಲದಿದ್ದರೆ ಪ್ರಪಂಚದ ಜ್ಞಾನ ತಿಳಿಯಲಾಗುವುದಿಲ್ಲ. ಜ್ಞಾನ ಮನುಷ್ಯನ ವ್ಯಕ್ತಿತ್ವದ ಕನ್ನಡಿಯಾಗಿದೆ. ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ನಾನೆಲ್ಲವನ್ನೂ ಬಲ್ಲೆ ಎಂಬ ಅಹಂಕಾರ ಎಂದಿಗೂ ಸಲ್ಲದು ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕಿ ಶಾರದಾ ಪಾಟೀಲ, ನಿವೃತ್ತ ಎಸ್ಪಿ ವೀರಣ್ಣ ಜಿರಾಳ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಆಡಳಿತಾಧಿಕಾರಿ ಎನ್.ಆರ್. ಗೌಡರ, ಸದಸ್ಯ ಬಿ.ಎಫ್. ಚೇಗರೆಡ್ಡಿ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಸ್ವಾಗತಿಸಿದರು. ಡಾ. ಕಲ್ಲಯ್ಯ ಹಿರೇಮಠ, ಡಾ. ಆರ್.ಆರ್. ಪಾಟೀಲ ನಿರೂಪಿಸಿದರು. ಪುಂಡಲೀಕ ಮಾದರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾನೂನು ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಜಂಗವಾಡ ಮಾತನಾಡಿ, ಶ್ರೀ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಗಳನ್ನು ನೋಡಿದರೆ ಇದೊಂದು ಗ್ರಾಮೀಣ ಗುರುಕುಲ, ವಿಶ್ವವಿದ್ಯಾಲಯ ಎಂಬ ಭಾವನೆ ಬರುತ್ತದೆ. ಇಲ್ಲಿಂದ ಈಗಾಗಲೇ ಅದೆಷ್ಟೋ ಜನರು ವಿದ್ಯೆ ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ನೀವೂ ಸಹ ಪ್ರತಿಭಾವಂತರಾಗಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿರಿ ಎಂದರು.


