ವಿಜಯಸಾಕ್ಷಿ ಸುದ್ದಿ, ಗದಗ : ಸರ್ವಜ್ಞ ನಮ್ಮ ನಾಡಿನ ಒಬ್ಬ ಶ್ರೇಷ್ಠ ಕವಿ. ಸರ್ವಜ್ಞನು ನೇರ-ನಿಷ್ಠುರ ನುಡಿಗಳಿಂದ ಈ ಸಮಾಜದ ಅಜ್ಞಾನ, ಮೌಢ್ಯಗಳನ್ನು ಖಂಡಿಸುವ ಕೆಲಸ ಮಾಡಿದ್ದಾನೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2682ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸರ್ವಜ್ಞನ ವಚನಗಳನ್ನು ಬೆಳಕಿಗೆ ತಂದವರು ರೆವರೆಂಡ್ ಉತ್ತಂಗಿ ಚನ್ನಪ್ಪನವರು. ನಮ್ಮ ಕನ್ನಡ ಸಾಹಿತ್ಯದ ಮುಕುಟಮಣಿ ಸರ್ವಜ್ಞನ ವಚನಗಳು. ಮನುಷ್ಯನಿಗೆ ಜ್ಞಾನ ಬಹಳ ಮಹತ್ವದ್ದು. ಜ್ಞಾನದಿಂದ ಮಾತ್ರ ಮೋಕ್ಷ ಸಾಧ್ಯ. ಜ್ಞಾನ ಇರದೆ ಇದ್ದರೆ ಎಲ್ಲವೂ ನಿರರ್ಥಕ. ಸರ್ವಜ್ಞನ ವಚನಗಳಲ್ಲಿ ಶಾಂತಿ, ಸಮಾಧಾನ, ಸರ್ವಧರ್ಮ ಸಮನ್ವಯತೆ, ಜ್ಞಾನದಜ್ಯೋತಿ ಅನೇಕ ಮಹತ್ವದ ವಿಷಯಗಳು ಅಡಗಿವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದಿಂದ 2022-23ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ ನಿಮಿತ್ತ ವೆಂಕಟೇಶ ಇಮ್ರಾಪೂರ, ಮಾಳಿಂಗರಾಯ ಪೂಜಾರ ಪೂಜ್ಯರಿಂದ ಸಂಮಾನ ಸ್ವೀಕರಿಸಿ ಮಾತನಾಡಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ವಿ.ಕುಂಬಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ವೀಣಾ ಬಿ.ಕಟ್ಟಿ, ವಚನ ಚಿಂತನೆಯನ್ನು ಕೀರ್ತಿ ಎಸ್.ನರಗುಂದ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಕೊಂಡಿದ್ದ ಉಮಾದೇವಿ ಕೋಂ. ಗುರುಸಿದ್ಧಪ್ಪ ಬುಳ್ಳಾನವರ ದಂಪತಿಗಳು ಹಾಗೂ ಪರಿವಾರ ಹುಬ್ಬಳ್ಳಿ ಅವರನ್ನು ಪೂಜ್ಯರು ಸಂಮಾನಿಸಿದರು.
ಸರ್ವರನ್ನು ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.
ಸರ್ವಜ್ಞನ ತ್ರಿಪದಿಗಳಲ್ಲಿ ಜೀವನ ಮೌಲ್ಯಗಳು ಕುರಿತು ಡಾ. ಅಕ್ಕಮಹಾದೇವಿ ರೊಟ್ಟಿಮಠ ಉಪನ್ಯಾಸ ನೀಡಿ, ಸರ್ವಜ್ಞ ದೊಡ್ಡದಾದ ವಿಶ್ವಕೋಶ. ಸರ್ವಜ್ಞನ ತ್ರಿಪದಿಗಳು ಒಂದು ಸಾಧನೆ. ಸರ್ವಜ್ಞ ಹೆಳದಿರುವ ವಿಷಯಗಳೇ ಇಲ್ಲ. ಪ್ರತಿಯೊಂದು ವಿಚಾರವನ್ನು ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ತಿಳಿಸಿಕೊಟ್ಟಿದ್ದಾನೆ ಎಂದು ಶ್ರೀಗಳು ನುಡಿದರು.