ವಿಜಯಸಾಕ್ಷಿ ಸುದ್ದಿ, ಭಾಲ್ಕಿ : ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮುಖ್ಯ. ಭೌತಿಕ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಸಂಪತ್ತು ಶಾಶ್ವತವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಲೂಕಿನ ಮೇಹಕರ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಪಡಬೇಕಾಗುತ್ತದೆ. ಪರಿಶ್ರಮ ಮತ್ತು ಪ್ರಯತ್ನದಿಂದ ಸಂಪಾದಿಸಲು ಸಾಧ್ಯ. ಮಾನವ ಜೀವನ ವೈವಿಧ್ಯತೆಯಿಂದ ಕೂಡಿದೆ. ವಿದ್ಯೆ, ವಿವೇಚನೆ, ಚಿಂತನೆ, ಆತ್ಮ ವಿಶ್ಲೇಷಣೆ ಮತ್ತು ಸತ್ಯ ಶುದ್ಧ ಧ್ಯೇಯಗಳು ಜೀವನದ ಶ್ರೇಯಸ್ಸಿಗೆ ಮೆಟ್ಟಿಲುಗಳಾಗಿವೆ. ಸಹನೆಗಿಂತ ದೊಡ್ಡ ತಪಸ್ಸು ಇನ್ನೊಂದಿಲ್ಲ. ಮನುಷ್ಯನಲ್ಲಿ ದೃಢತೆಯಿದ್ದರೆ ಯಾರೂ ಏನೂ ತೊಂದರೆ ಮಾಡಲು ಸಾಧ್ಯವಿಲ್ಲ.
ಶ್ರೀ ಜಗದ್ಗುರು ರೇಣುಕಾಚಾರ್ಯರು ಆಧ್ಯಾತ್ಮದ ತರಂಗಗಳನ್ನು ಜೀವಾತ್ಮನ ಉನ್ನತಿಗಾಗಿ ಬೋಧಿಸಿದ್ದಾರೆ. ರಾಜೇಶ್ವರ ಶ್ರೀಗಳು ಒಳ್ಳೆಯದನ್ನು ಉಳಿಸುವ ಪ್ರಯತ್ನದಲ್ಲಿ ಶ್ರಮವಹಿಸಿ ಸಾಧನೆ ಮಾಡಿದ್ದಾರೆ. ಧಾರ್ಮಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಚಿಂತಿಸುತ್ತಿರುವ ಶ್ರೀಗಳ ಕಾರ್ಯ ಎಲ್ಲರ ಮಚ್ಚುಗೆಗೆ ಪಾತ್ರವಾಗಿದೆ. ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶ್ರೀಗಳು ಮುಂದೊಂದು ದಿನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಲೆಂದು ಬಯಸಿ ಶುಭ ಹಾರೈಸಿದರು.
ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಇಂದು ನಮ್ಮ ಜೀವನದ ಅವಿಸ್ಮರಣೀಯವಾದ ಪವಿತ್ರ ದಿನ. ಪೂರ್ವಜರು ಮಾಡಿದ ತಪಸ್ಸಿನ ಶಕ್ತಿ ನಮ್ಮನ್ನು ಈ ಎತ್ತರಕ್ಕೆ ಬೆಳೆಸಿದೆ. ಒಳ್ಳೆಯದಕ್ಕಿಂತ ಕೆಟ್ಟದ್ದು ಬಹು ಬೇಗ ಬೆಳೆದು ಅಷ್ಟೇ ಬೇಗ ನಾಶವಾಗುತ್ತದೆ. ಬೆಳಗುವ ಸೂರ್ಯನಿಗೆ ಮಣ್ಣು ಎರಚಿದರೆ ತಾಗದು. ಅದು ಎರಚಿದವನ ಕಣ್ಣಲ್ಲಿ ಬೀಳುವುದು. ಕಸ್ತೂರಿ ಸುಗಂಧವನ್ನು ಯಾರೂ ಹೊರ ಹಾಕಬೇಕಾಗಿಲ್ಲ. ಸದ್ಗುಣವುಳ್ಳ ಸಜ್ಜನರ ಬಾಳು ಕೂಡಾ ಹಾಗೆ ಇರುತ್ತದೆ. ಕಷ್ಟಗಳು ಸುಖದ ದಾರಿಗೆ ರಹದಾರಿ. ಸಂಸ್ಕೃತಿಯೇ ಧರ್ಮದ ಬುನಾದಿ. ಸಾಹಿತ್ಯ ಧರ್ಮ ಸತ್ಪರಂಪರೆಗಳೇ ಧರ್ಮದ ಆತ್ಮ. ಈ ದಿಶೆಯಲ್ಲಿ ಮಾಡಿದ ಪ್ರಯತ್ನ ನಮಗೆ ಸಂತೃಪ್ತಿ ತಂದಿದೆ ಎಂದರು.
ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ರಾಜೇಶ್ವರ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. ಹಲಬುರ್ಗಾ ಹಾವಣಿ ಲಿಂಗೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಪವಿತ್ರ ಸಮಾರಂಭದಲ್ಲಿ ಲಾಡಗೇರಿ ಶ್ರೀಗಳು, ಹುಡುಗಿ ವಿರಕ್ತಮಠದ ಶ್ರೀಗಳು, ಕಿಟ್ಟಾ ಶ್ರೀಗಳು, ಸಾಯಿಗಾಂವ ಶ್ರೀಗಳು, ಸಿಂಧನಕೇರಾ ಶ್ರೀಗಳು, ಚಿದಾನಂದ ಶ್ರೀಗಳು ಮತ್ತು ಚರದಿಪುರದ ಅವಧೂತ ದತ್ತಗಿರಿ ಮಹಾರಾಜರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಗಳವರ ಮಾತೋಶ್ರೀ ವನದೇವಿ ಸುರೇಶಸ್ವಾಮಿ ಹಿರೇಮಠ ಇವರ ಜನ್ಮ ಶತಮಾನೋತ್ಸವ ಆಚರಿಸಲಾಯಿತು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಸಿದ್ವೀರಯ್ಯಸ್ವಾಮಿ ಹಿರೇಮಠ ನಿರೂಪಿಸಿದರು.
ಬೀದರ ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ಮಾತನಾಡಿ, ಮನದ ಶಾಂತಿಗೆ ಧಾರ್ಮಿಕ ಸಮಾರಂಭಗಳ ಅವಶ್ಯಕತೆಯಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮಯಜ್ಞ ಮಾನವ ಸಮುದಾಯದ ಮೇಲೆ ಅಪಾರ ಪ್ರಭಾವ ಬೀರುತ್ತದೆ ಎಂದರು.



