ಆನೇಕಲ್, ಏಪ್ರಿಲ್ 09: ಹುಳಿಮಾವು ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದ ರಾತ್ರಿ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ಭೀಕರ ಘಟನೆ ನಡೆದಿದೆ. ಪಲ್ಲಕ್ಕಿಗಳನ್ನು ವೀಕ್ಷಿಸುತ್ತಿದ್ದ 27 ವರ್ಷದ ಅಕ್ಷತ್, ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮಾರ್ಗ ಮಧ್ಯೆ ಮೃತರಾಗಿದ್ದಾರೆ.
ಅಕ್ಷತ್ ಬನಶಂಕರಿ ನಿವಾಸಿಯಾಗಿದ್ದು, ಸಂಬಂಧಿಕರು ಮತ್ತು ಸ್ನೇಹಿತರಿಗೆ ಮದುವೆಯ ಆಹ್ವಾನ ಪತ್ರಿಕೆ ವಿತರಿಸಲು ಜಾತ್ರೆಗೆ ಬಂದಿದ್ದರು. ಘಟನೆ ಸಂಭವಿಸಿದಾಗ ಅವರು ಸ್ಥಳದಲ್ಲಿ ಉಳಿದುಕೊಂಡಿದ್ದರು. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ದುರಂತ ಸಂಭವಿಸಿದ್ದು, ಈ ಘಟನೆ ನಂತರ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ.
ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಈ ಅಪಘಾತಕ್ಕೆ ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬರದಿರುವುದು ಕೂಡ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರು ಯುವಕನ ಅಕಾಲಿಕ ಮರಣದಿಂದ ಆಘಾತಗೊಂಡಿದ್ದು, ಘಟನೆ ಜಾತ್ರೆಯನ್ನೂ ದುಃಖಭರಿತವಾಗಿ ಮಾಡಿದೆ.



