ಕೋಲಾರ: ರಾಸಾಯನಿಕ ವಸ್ತುಗಳನ್ನು ಬಳಸಿ ನಕಲಿ ಹಾಲು ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಕೆಜಿಎಫ್ ಪೊಲೀಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶ ಮೂಲದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳು, ಕೆಜಿಎಫ್ ತಾಲ್ಲೂಕಿನ ಬಳ್ಳಗೆರೆ ಗ್ರಾಮದ ಸಮೀಪ ಅಕ್ರಮವಾಗಿ ಕಲಬೆರಕೆ ಹಾಲು ತಯಾರಿಸುತ್ತಿದ್ದರೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 22 ಲಕ್ಷ ರೂ. ಮೌಲ್ಯದ ಉಪಕರಣಗಳು ಹಾಗೂ ಕಲಬೆರಕೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಪಾಮಾಯಿಲ್, ಮಿಲ್ಕ್ ಪೌಡರ್, ಅಂಗನವಾಡಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರದ ಪುಷ್ಟಿ ಪೌಡರ್, ಲಡ್ಡು, ಹಾಲಿನ ಕ್ಯಾನ್‌ಗಳು ಹಾಗೂ ಎರಡು ಲಗೇಜ್ ಆಟೋಗಳನ್ನು ಜಪ್ತಿ ಮಾಡಲಾಗಿದೆ.
ಪತ್ತೆಯಾದ ವಸ್ತುಗಳ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣ ಆಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



