ಕೋಲಾರ: ಶಬರಿಮಲೆ ಯಾತ್ರೆಗಾಗಿ ಹೊರಟಿದ್ದ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬರು ತಮಿಳುನಾಡಿನಲ್ಲಿ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿಯ ನಿವಾಸಿ ರವಿ (40) ಕಾಣೆಯಾದ ವ್ಯಕ್ತಿ.
ಮಂಗಳವಾರ ತಿರುಚಂದೂರ್ ಪ್ರವಾಸಕ್ಕೆ ತೆರಳಿದ್ದ ರವಿ, ಅಂದಿನಿಂದ ಕುಟುಂಬದವರ ಸಂಪರ್ಕಕ್ಕೆ ಲಭ್ಯವಾಗಿಲ್ಲ. ನಾಪತ್ತೆಯಾಗಿ 4 ದಿನಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ ಎಂಬುದು ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಸಂಬಂಧ ತಿರುಚಂದೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸ್ ತಂಡಗಳು ಹಾಗೂ ಕುಟುಂಬಸ್ಥರು ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ರವಿಯ ಪತ್ತೆಗಾಗಿ ತೀವ್ರ ಪ್ರಯತ್ನ ನಡೆಯುತ್ತಿದ್ದು, ಯಾವುದೇ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಲು ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



