ಕೋಲಾರ ಹಾಲು ಉತ್ಪಾದಕರಿಗೆ ರೂ. 2 ಪ್ರೋತ್ಸಾಹ ಧನ ಹೆಚ್ಚಳ: ಸಚಿವ ಬೈರತಿ ಸುರೇಶ್

0
Spread the love

ಬೆಂಗಳೂರು: ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವತಿಯಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ 2 ರೂಪಾಯಿಗಳ ಪ್ರೋತ್ಸಾಹ ಧನವನ್ನು ಹೆಚ್ಚಿಗೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ಎಸ್ ಸುರೇಶ (ಬೈರತಿ) ತಿಳಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರಾದ ಬೈರತಿ ಸುರೇಶರವರು,

Advertisement

ಕೋಲಾರ ಹಾಲು ಒಕ್ಕೂಟ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಕೋಲಾರ ಜಿಲ್ಲಾ ಒಕ್ಕೂಟ ಈ ತೀರ್ಮಾನ ತೆಗೆದುಕೊಂಡಿದ್ದು, ಇದೆ ಮಾರ್ಚ್‌ 20 ರಿಂದ 2 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತೇವೆ ಎಂದು ತಿಳಿಸಿದರು. ಪ್ರಸ್ತುತ 6.64 ಲಕ್ಷ ಲೀಟರ್‌ ಹಾಲನ್ನು ಕೋಲಾರ ಜಿಲ್ಲಾ ಹಾಲು ಒಕ್ಕೂಟದಿಂದ ಶೇಖರಣೆಯಾಗುತ್ತಿದ್ದು, 2025-26ನೇ ಸಾಲಿಗೆ 7.50 ಲಕ್ಷ ಲೀಟರ್‌ ಹಾಲು ಶೇಖರಣೆ ಗುರಿಯನ್ನು ಒಕ್ಕೂಟವು ಹೊಂದಿದೆ.

ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಗೂ ಹಾಲು ಉತ್ಪಾದನ ವೆಚ್ಚ ಅಧಿಕವಾಗಿರುವುದನ್ನು ಸರಿದುಗಿಸುವ ಅವಶ್ಯಕತೆ ಇರುವುದರಿಂದ ಹಾಲು ಉತ್ಪಾದಕರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಹಾಲು ಶೇಖರಣೆ ಮತ್ತು ಗುಣಮಟ್ಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ ಎಂದು ಸಚಿವರಾದ ಬೈರತಿ ಸುರೇಶರವರು ತಿಳಿಸಿದರು.

ರಾಜ್ಯದ ಇತರೆ ಜಿಲ್ಲೆಗಳ ಹಾಲು ಒಕ್ಕೂಟಗಳ ಪ್ರೋತ್ಸಾಹಧನಕ್ಕೆ ಹೋಲಿಸಿದರೆ ಕೋಲಾರ ಜಿಲ್ಲಾ ಹಾಲು ಒಕ್ಕೂಟ 2 ರೂಪಾಯಿಯನ್ನು ಹೆಚ್ಚಿಗೆ ನೀಡಲಾಗುತ್ತಿದ್ದು, ಅಂದರೆ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ ಹಾಲನ್ನು ರೂ 33.40 ಪೈಸೆಗಳಿಗೆ ಖರೀದಿಸಲಾಗುತ್ತದೆ ಇದು ಯುಗಾದಿ ಹಬ್ಬಕ್ಕೆ ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ನೀಡಿದ ಕೊಡುಗೆ ಎಂದು ಸಂತಸತಿಂದ ಹೇಳಲು ಇಚ್ಚಿಸುತ್ತೇನೆ ಎಂದರು.

ಬೇಸಿಗೆ ಕಾಲದಲ್ಲಿಯೂ ಹಾಲು ಉತ್ಪಾದನೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೊರಲಕ್ಕಿ ಗ್ರಾಮದಲ್ಲಿ ಎನ್‌.ಡಿ.ಡಿ.ಬಿ (National Dairy Development Board) ಮತ್ತು ಕರ್ನಾಟಕ ಹಾಲು ಮಹಾ ಮಂಡಳ (KMF) ಸಹಾಯೋಗದೊಂದಿಗೆ ಶ್ರೀ ಮಾರಿಕಾಂಭ ಮೇವು ಅಭಿವೃದ್ಧಿ ರೈತ ಸಹಕಾರ ಸಂಘ ನಿಯಮಿತವನ್ನು ಸ್ಥಾಪಿಸಲಾಗಿದೆ.

ಸದರಿ ಸಂಘದ ವತಿಯಿಂದ ವಿಶೇಷವಾಗಿ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಮೇವು ಬೆಳೆಯಲು ವಿವಿಧ ತಳಿಯ ಮೇವಿನ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲು ಇದು ಸಹಕಾರಿಯಾಗಲಿದೆ. ರಸಮೇವು ಪ್ರತಿ ಕೆ.ಜಿ ಗೆ 10 ರೂಪಾಯಿಯಂತೆ ಮಾರುಕಟ್ಟೆ ದರ ಇದ್ದು, ರೂ. 6 ರಂತೆ ರಿಯಾಯಿತಿ ದರದಲ್ಲಿ ಹಾಲು ಉತ್ಪಾದಕರಿಗೆ ಮಾರಾಟ ಮಾಡಲು ಕ್ರಮ ವಹಿಸಲಾಗಿದೆ ಎಂದು ಸಚಿವರಾದ ಬೈರತಿ ಸುರೇಶ ತಿಳಿಸಿದರು.


Spread the love

LEAVE A REPLY

Please enter your comment!
Please enter your name here