ಕೋಲಾರ: ನಾಡಿನಾದ್ಯಂತ ಇಂದು ಮಹಾ ಶಿವರಾತ್ರಿ ಹಬ್ಬದ ಸಂಭ್ರಮ-ಸಡಗರ. ನಸುಕಿನ ಜಾವದಿಂದಲೇ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಿಗೆ ವಿಶೇಷ ಅಭಿಷೇಕ ಆರಂಭವಾಗಿದೆ. ಅದರಂತೆ ಕೋಲಾರ ತಾಲೂಕಿನ ಕೊರಗಂಡಹಳ್ಳಿ ಗ್ರಾಮದಲ್ಲಿರುವ ಶ್ರೀ ಕಾಶಿವಿಶ್ವನಾಥ ದೇವಸ್ಥಾನದಲ್ಲೂ ಬೆಳಗ್ಗೆಯಿಂದಲೇ ಪೂಜೆ ಶುರುವಾಗಿದ್ದು,
ಮಹಾ ಶಿವರಾತ್ರಿ ಪೂಜೆ ಹಿನ್ನೆಲೆ ಅಭಿಷೇಕದ ವೇಳೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವ ಮೂಲಕ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಹೌದು ಕೋಲಾರದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ ಸಂದರ್ಭದಲ್ಲಿ ಸರಿಯಾಗಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬಿದ್ದಿದೆ.
ಇದು ಪ್ರಕೃತಿ ವಿಸ್ಮಯವೂ ಹೌದು..ಶಿವಲೀಲೆಯೂ ಹೌದು ಎನ್ನುತ್ತಿದ್ದಾರೆ ಜನ. ಮೊದಲು ನಂದಿಯನ್ನ ಹಾದು ಹೋದ ಸೂರ್ಯನ ಕಿರಣಗಳು ನಂತರ ಶಿವಲಿಂಗದ ಮೇಲೆ ಪ್ರಕಾಶಮಾನವಾಗಿ ಬೆಳಗಿದ ಕ್ಷಣಕ್ಕೆ ಅನೇಕ ಭಕ್ತರು ಸಾಕ್ಷಿಯಾದರು. ಇಲ್ಲಿಗೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.