ಕೋಲ್ಕತ್ತಾ:- ತಂದೆ, ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲ್ಕತ್ತಾದ ಪರ್ಣಶ್ರೀ ಪ್ರದೇಶದಲ್ಲಿ ಜರುಗಿದೆ. ಸಜನ್ ದಾಸ್ (53), ಶ್ರೀಜಾ ದಾಸ್ ನೇಣಿಗೆ ಶರಣಾದವರು. ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಜನ್, ಚಿಮಣಿ ಹಾಗೂ ವಾಟರ್ ಪ್ಯೂರಿಫೈಯರ್‌ಗಳ ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಮಗಳು ಶ್ರೀಜಾ ಹುಟ್ಟಿನಿಂದಲೇ ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದರಿಂದ ನಿರಂತರ ಔಷಧಿಗಳನ್ನು ಪಡೆಯುತ್ತಿದ್ದಳು. ಸಜನ್ ತಮ್ಮ ಮಗಳ ಅನಾರೋಗ್ಯದ ಬಗ್ಗೆ ಮತ್ತು ವೈದ್ಯಕೀಯ ಖರ್ಚಿನ ಬಗ್ಗೆ ಚಿಂತಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಜನ್ ಫೆ.28 ರಂದು ಮಗಳನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಧ್ಯಾಹ್ನ ಆಸ್ಪತ್ರೆಗೆ ತಲುಪಿರುವ ಬಗ್ಗೆ ಪತ್ನಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಸಜನ್, ಪತ್ನಿಯ ಕರೆ ಸ್ವೀಕರಿಸದಿದ್ದಾಗ ಗಾಬರಿಗೊಂಡ ಪತ್ನಿ ಕುಟುಂಬದ ಸ್ನೇಹಿತ ರಂಜಿತ್ ಕುಮಾರ್ ಸಿಂಗ್‌ಗೆ ಮಾಹಿತಿ ನೀಡಿದ್ದರು. ರಂಜಿತ್, ಸಜನ್ ಅಂಗಡಿ ಬಳಿ ತೆರಳಿ ಬಾಗಿಲು ತೆರೆದಾಗ ತಂದೆ, ಮಗಳು ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪರ್ಣಶ್ರೀ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.