‘ಕೋಲು ಮಂಡೆ ಜಂಗಮದೇವ’ ಖ್ಯಾತಿಯ ಕಂಸಾಳೆ ಖ್ಯಾತ ಕಲಾವಿದ, ಮೈಸೂರಿನ ಬಂಡಿಕೇರಿಯ ನಿವಾಸಿ ಕುಮಾರಸ್ವಾಮಿ ಅವರು ಸೋಮವಾರ ನಿಧನರಾದರು. ಜಾನಪದ ಕಲಾವಿದ ಕಂಸಾಳೆ ಮಹಾದೇವಯ್ಯ ಅವರ ಪುತ್ರರಾದ ಕುಮಾರಸ್ವಾಮಿ, ಬಾಲ್ಯದಿಂದಲೇ ತಂದೆ ಜತೆ ಕಂಸಾಳೆಯನ್ನು ಮೈಗೂಡಿಸಿಕೊಂಡು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಖ್ಯಾತಿ ಘಳಿಸಿದ್ದರು. ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಗ್ಗೆ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಗಾರದಲ್ಲಿ ಇವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮೈಸೂರಿನ ಹಿರಿಯ ಜಾನಪದ ಕಲಾವಿದ ಕುಮಾರಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತಂದೆ ಕಂಸಾಳೆ ಮಹಾದೇವಯ್ಯ ಅವರಂತೆ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಾನಪದ ಸೊಬಗನ್ನು ಕನ್ನಡಿಗರಿಗೆ ಉಣಬಡಿಸಿದ ಕುಮಾರಸ್ವಾಮಿ ಅವರ ಕಲಾಸೇವೆ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗ ಮತ್ತು ಬಂಧುಮಿತ್ರರಿಗೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
1951ರಲ್ಲಿ ವರಕೋಡು ಸಮೀಪದ ಬಡಗಲಹುಂಡಿಯಲ್ಲಿ ಜನಿಸಿದ ಕುಮಾರಸ್ವಾಮಿ ಅವರು ತಂದೆ ಕಂಸಾಳೆ ಮಹಾದೇವಯ್ಯ ಅವರಿಂದ ಕಂಸಾಳೆಯನ್ನು ಕಲಿತಿದ್ದರು. ವಿದ್ಯಾಭ್ಯಾಸವನ್ನು 7ನೇ ತರಗತಿಗೆ ನಿಲ್ಲಿಸಿ ತಂದೆಯೊಂದಿಗೆ ಪ್ರದರ್ಶನಗಳನ್ನು ನೀಡಲಾರಂಭಿಸಿದರು.ಬಳಿಕ ಅದರಲ್ಲಿಯೇ ಮುಂದುವರಿದರು.
ಶಿವರಾಜ್ ಕುಮಾರ್ ನಟನೆಯ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ ಜಂಗಮದೇವ’ ಹಾಡಿಗೆ ಕುಮಾರಸ್ವಾಮಿ ಅವರು ಕಂಸಾಳೆ ಸಂಗೀತದ ನೃತ್ಯ ಸಂಯೋಜಿಸಿದ್ದರು. ಆ ಮೂಲಕ ವರನಟ ರಾಜಕುಮಾರ್ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇವರು, ಇಟಲಿ, ರೋಂ, ಟರ್ಕಿ ಸೇರಿ ದೇಶ- ವಿದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದಾರೆ.
ಕಂಸಾಳೆ, ಹಾಡುಗಾರಿಕೆ, ನೃತ್ಯ ಪ್ರಕಾರ, ಬೀಸು ಕಂಸಾಳೆಯಲ್ಲಿ ಪರಿಣತಿ ಗಳಿಸಿದ್ದ ಅವರು, ವಿವಿಧ ವಿಷಯಗಳನ್ನು ಕಂಸಾಳೆಗೆ ಒಗ್ಗಿಸಿಕೊಂಡು ಪ್ರಸ್ತುತಪಡಿಸುತ್ತಿದ್ದರು. ಇವರಿಗೆ ‘ಜಾನಪದ ಲೋಕ’ ಪ್ರಶಸ್ತಿ, ಕನ್ನಡ ಜಾನಪದ ಪರಿಷತ್ತಿನ ‘ಜಾನಪದ ಪ್ರಪಂಚ’, ಕನ್ನಡ ಬಳಗದ ‘ಕಂಸಾಳೆ ಜಾನಪದ ರತ್ನ’, ಕನ್ನಡ ಕ್ರಾಂತಿ ದಳದ ‘ಕಂಸಾಳೆ ಕಂಠೀರವ’ ಬಿರುದು ಸೇರಿ ವಿವಿಧ ಬಿರುದು, ಪ್ರಶಸ್ತಿಗಳನ್ನು ಪಡೆದಿದ್ದರು. ಇವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಕಂಸಾಳೆ ಮಾದೇವ್ ಕುಮಾರ, ಪುತ್ರಿಯರಾದ ರೂಪಾ, ಪಾರ್ವತಿ ಇದ್ದಾರೆ.