ಕೊಪ್ಪಳ: ಕುಡಿದ ಅಮಲಿನಲ್ಲಿ, ಗಾಂಜಾ ಮತ್ತಿನಲ್ಲಿ 100 ರೂ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ನಡೆಸಿ, ಓರ್ವನನ್ನು ಕೊಲೆ ಮಾಡಿದ ಭೀಕರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಪ್ಪಳದಲ್ಲಿ ನಡೆದ ವಿದೇಶಿ ಮಹಿಳೆ ಮೇಲಿನ ಈ ದುರಂತ ಪ್ರಕರಣಕ್ಕೆ ಗಂಗಾವತಿ ನ್ಯಾಯಾಲಯ ಕಠಿಣ ತೀರ್ಪು ನೀಡಿದ್ದು, 3 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಮಾ.06ರಂದು ನಡೆದ ಈ ಅಮಾನವೀಯ ಘಟನೆಯಲ್ಲಿ ಸಂತ್ರಸ್ತರಿಗೆ ನ್ಯಾಯ ದೊರೆತಿದೆ. ಆದರೆ ಅಪರಾಧಿಗಳ ಕುಟುಂಬಗಳು ಮಾತ್ರ ಸಂಕಷ್ಟದಲ್ಲಿ ಮುಳುಗಿವೆ. ಬಳ್ಳಾರಿ ಜೈಲಿನಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ನೋಡಲು ಹೋಗುವ ಸ್ಥಿತಿಯಲ್ಲೂ ಅವರ ಕುಟುಂಬಸ್ಥರು ಇಲ್ಲದಂತಾಗಿದೆ.
ಶಿಕ್ಷೆ ಘೋಷಣೆಯಾದ ಬಳಿಕ ಶರಣಬಸವ ತಂದೆ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅಕ್ಕಪಕ್ಕದವರು ಕಾಪಾಡಿದರೆಂದು ಶರಣಬಸವ ತಾಯಿ ಕಣ್ಣೀರಿಡುತ್ತಿದ್ದಾರೆ.
ಪ್ರಮುಖ ಆರೋಪಿ ಮಲ್ಲಯ್ಯ ಅಲಿಯಾಸ್ ಹಂದಿ ಮಲ್ಲನ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಈತನಿಗೆ 4 ತಿಂಗಳ ಮಗು ಇದೆ. ಪತ್ನಿ ತನ್ನ ತಾಯಿಯೊಂದಿಗೆ ಗುಡಿಸಲಿನಲ್ಲಿ ವಾಸವಿದ್ದು, 4 ತಿಂಗಳ ಮಗುವಿನ ಜೊತೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.
ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಿದೆ. ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ಹೋಗುವ ಅವಕಾಶವಿದೆ. ಆದರೆ ಕೂಲಿ ಕೆಲಸ ಮಾಡಿದರೆ ಮಾತ್ರ ಹೊಟ್ಟೆ ತುಂಬುವ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಇದೀಗ ನರಕ ದರ್ಶನವಾಗಿದೆ. ಕುಡಿತ ಮತ್ತು ಗಾಂಜಾ ಮತ್ತದಲ್ಲಿ ಮಾಡಿದ 1 ಕೃತ್ಯದಿಂದ 3 ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.



